ಮುಂದಿನ ಮಗುವಾದ್ರೂ ಹೆಣ್ಣಾಗಲೆಂದು ಈ ದಂಪತಿ ಹೀಗೆಲ್ಲಾ ಮಾಡೋದಾ?

child
Published on

ಮಿಚಿಗನ್‌: ಬಹುತೇಕ ದಂಪತಿಗೆ ಗಂಡುಮಕ್ಕಳು ಇಲ್ಲಾ ಎನ್ನುವ ಚಿಂತೆ. ಮನೆಗೊಂದು ಗಂಡು ಸಂತಾನ ಬೇಕು ಎನ್ನುವ ಕಾರಣಕ್ಕೆ, ಏನೆಲ್ಲಾ ಹರಕೆಗಳು, ಏನೆಲ್ಲಾ ವ್ರತಗಳು. ಗಂಡು ಹುಟ್ಟಿಲ್ಲ ಎಂದು ಸೊಸೆಯನ್ನೇ ಸಾಯಿಸಿರುವ ಇಲ್ಲವೇ ಗಂಡು ಬೇರೊಂದು ಮದುವೆಯಾಗಿರುವ ಉದಾಹರಣೆಗಳೂ ಸಾಕಷ್ಟಿವೆ.

ಆದರೆ ಇದಕ್ಕೆ ಅಪವಾದ ಎಂಬಂತೆ, ಇಲ್ಲೊಂದು ದಂಪತಿ ಹೆಣ್ಣುಮಗುವಿಗಾಗಿ ಆಸೆ ಪಟ್ಟು ಮಾಡಿರುವ ಸಾಹಸ ಕೇಳಿದ್ರೆ ಶಾಕ್‌ ಆಗೋದು ಖಂಡಿತ.

ಅಷ್ಟಕ್ಕೂ ಇವರು ಮಾಡಿದ್ದೇನು ಗೊತ್ತಾ? ಮನೆಗೊಬ್ಬಳು ಭಾಗ್ಯಲಕ್ಷ್ಮಿ ಬರಲಿ ಎಂದು ಮಕ್ಕಳನ್ನು ಹೆರುತ್ತಲೇ ಹೋಗಿದ್ದಾಳೆ ಈ ಮಹಾತಾಯಿ. ಒಂದಾಯ್ತು, ಎರಡಾಯ್ತು, ಮೂರಾಯ್ತು... 10.... 14 ಆದ್ರೂ ಹೆಣ್ಣುಮಗು ಹುಟ್ಟಲೇ ಇಲ್ಲ. ಬರೋಬ್ಬರಿ 14 ಮಂದಿ ಗಂಡುಸಂತಾನವಾಯ್ತು.

ಹಾಗೆಂದು ಈ ದಂಪತಿ ಸುಮ್ಮನಿರಲಿಲ್ಲ. ಹೆಣ್ಣುಮಗು ಬೇಕೇ ಬೇಕು ಎಂದು ಪಣತೊಟ್ಟರು. 15ನೇ ಬಾರಿ ಮಹಿಳೆ ಗರ್ಭವತಿಯಾದರು. ಅಬ್ಬಾ...! ಅಂತೂ ಇದೀಗ ಅವರ ಆಸೆ ತೀರಿದೆ. 15ನೇ ಮಗುವಾಗಿ ಭಾಗ್ಯಲಕ್ಷ್ಮಿ ಈ ದಂಪತಿಯ ಮಡಿಲು ತುಂಬಿದ್ದಾಳೆ!

ಅಂದಹಾಗೆ ಇಂಥ ‘ಸಾಹಸ‘ ಮಾಡಿದವರು ಅಮೆರಿಕದ ಮಿಚಗನ್‌ ಮೂಲದ ದಂಪತಿ. ಇವರ ಹೆಸರು ಕ್ಯಾತ್ರಿ ಮತ್ತು ಜೇ ಶ್ವಾಂದತ್‌. ಈ ದಂಪತಿಗೆ ಮದುವೆಯಾಗಿ 32 ವರ್ಷಗಳಾಗಿವೆ. ಇಲ್ಲಿಯವರೆಗೆ ಹೆಣ್ಣು ಸಂತಾನಕ್ಕಾಗಿ 14 ಗಂಡು ಮಕ್ಕಳಿಗೆ ಜನ್ಮ ನೀಡಿದ್ದಾರೆ ಕ್ಯಾತ್ರಿ.

ನಮಗೆ ಹೆಣ್ಣುಮಕ್ಕಳು ಎಂದರೆ ತುಂಬಾ ಇಷ್ಟ. ಆದರೆ ದೇವರಿಗೆ ಅದ್ಯಾಕೋ ನಮ್ಮ ಮೇಲೆ ದಯೆಯೇ ಬರಲಿಲ್ಲ. ಒಂದರ ಮೇಲೊಂದು ಗಂಡು ಸಂತಾನವಾಗುತ್ತಲೇ ಹೋಯಿತು. ಈಗ ಅಂತೂ ದೇವರು ಕಣ್ಣುಬಿಟ್ಟಿದ್ದಾನೆ. ಹೆಣ್ಣು ಸಂತಾನವಾಗಿದೆ ಎಂದು ಹೆಮ್ಮೆಯಿಂದ ಹೇಳುತ್ತಾರೆ ದಂಪತಿ.

ಈ ಖುಷಿಯನ್ನು ತಮ್ಮ ಕುಟುಂಬದ ಫೇಸ್‌ಬುಕ್‌ ಪೇಜ್‌ನಲ್ಲಿ ಅವರು ಹಂಚಿಕೊಂಡಿದ್ದಾರೆ. ನಮ್ಮ ಪುಟ್ಟ ಮ್ಯಾಗಿ ಜೇನ್ ಹುಟ್ಟಿದ್ದಾಳೆ. ನಮಗಾಗುತ್ತಿರುವ ಸಂತೋಷಕ್ಕೆ ಪಾರವೇ ಇಲ್ಲ ಎಂದು ಅವರು ಬರೆದುಕೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net