ಗ್ಯಾಂಗ್​ರೇಪ್​ ಮಾಡಿ ನಾಲಗೆ ಕಟ್: ಜೀವನ್ಮರಣಗಳ ನಡುವೆ ಹೋರಾಡುತ್ತಿದ್ದ ಯುವತಿ ಸಾವು!

gangrape
Published on

ಲಖನೌ: ಗ್ಯಾಂಗ್​ರೇಪ್​ ಮಾಡಿದ್ದೂ ಅಲ್ಲದೇ ನಾಲಗೆಯನ್ನೇ ಕಟ್​ ಮಾಡಿ ವಿಕೃತಿ ಮೆರೆದಿದ್ದರು ಕಾಮುಕರು. ಎರಡು ವಾರಗಳ ಹಿಂದೆ 19 ವರ್ಷದ ಯುವತಿಯ ಮೇಲೆ ಆಗಿತ್ತು ಈ ಭಯಾನಕ ಘಟನೆ. ಸುಮಾರು 15 ದಿನ ಜೀವನ್ಮರಣಗಳ ನಡುವೆ ಹೋರಾಟ ಮಾಡಿದ ಸಂತ್ರಸ್ತೆ ಇಂದು ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾಳೆ!

ಉತ್ತರ ಪ್ರದೇಶದ ಹಾಥ್ರಸ್ ಜಿಲ್ಲೆಯಲ್ಲಿ ಈ ಘಟನೆ ಸಂಭವಿಸಿತ್ತು. ನಾಲ್ವರು ಕಾಮುಕರು ಈಕೆಯ ಮೇಲೆ ಗ್ಯಾಂಗ್ ರೇಪ್ ಮಾಡಿದ್ದರು, ಉಸಿರುಕಟ್ಟಿಸುವ ಪ್ರಯತ್ನ ಮಾಡಲಾಗಿತ್ತು. ಈ ಸಂದರ್ಭದಲ್ಲಿ ಅಕೆಯ ನಾಲಗೆ ಕೂಡ ಕಟ್​ ಆಗಿತ್ತು!

ಗಂಭೀರ ಸ್ಥಿತಿಯಲ್ಲಿದ್ದ ಯುವತಿಯನ್ನು ಜವಾಹರಲಾಲ್ ನೆಹರೂ ಮೆಡಿಕಲ್ ಆಸ್ಪತ್ರೆಯಿಂದ ನಿನ್ನೆಯಷ್ಟೇ ಏಮ್ಸ್ ಆಸ್ಪತ್ರೆಗೆ ವರ್ಗಾಯಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾಳೆ.

ಸೆಪ್ಟೆಂಬರ್ 14ರಂದು ಹೊಲಕ್ಕೆ ಹೋಗಿದ್ದ ಈಕೆ ವಾಪಸ್​ ಆಗಿರಲಿಲ್ಲ. ಹುಡುಕಾಟ ನಡೆಸಿದಾಗ ಗಂಭೀರವಾಗಿ ಗಾಯಗೊಂಡ ಸ್ಥಿತಿಯಲ್ಲಿ ಪತ್ತೆಯಾಗಿದ್ದಳು. ದುಪ್ಪಟ್ಟಾದಿಂದ ದುಷ್ಕರ್ಮಿಗಳು ತನ್ನನ್ನು ಎಳೆದುಕೊಂಡು ಹೋಗಿದ್ದರು, ಕತ್ತು ಹಿಸುಕಿದ್ದರು ಎಂದು ಯುವತಿ ಹೇಳಿಕೆ ನೀಡಿದ್ದಳು.

ನಂತರ ಈಕೆಯನ್ನು ಜವಾಹರಲಾಲ್ ನೆಹರೂ ಮೆಡಿಕಲ್ ಕಾಲೇಜು ಆಸ್ಪತ್ರೆಗೆ ದಾಖಲಿಸಲಾಯಿತು. ಎರಡೂ ಕಾಲುಗಳು ನಿಷ್ಕ್ರಿಯಗೊಂಡಿದ್ದವು. ಈಕೆಯ ಕೈಗಳೂ ಸ್ವಲ್ಪಮಟ್ಟಿಗೆ ಸ್ವಾಧೀನ ಕಳೆದುಕೊಂಡಿದ್ದವು. ವೆಂಟಿಲೇಟರ್​ನಲ್ಲಿ ಇಡಲಾಗಿತ್ತು. ಆದರೆ ಪರಿಸ್ಥಿತಿ ಗಂಭೀರವಾದ ಹಿನ್ನೆಲೆಯಲ್ಲಿ ನಿನ್ನೆ ದೆಹಲಿಯ ಏಮ್ಸ್ ಆಸ್ಪತ್ರೆಗೆ ಶಿಫ್ಟ್​ ಮಾಡಲಾಗಿತ್ತು.

ಅತ್ಯಾಚಾರಿಗಳೆಂದು ಗುರುತಿಸಲಾಗಿರುವ ಸಂದೀಪ್, ರಾಮು, ಲವಕುಶ್ ಮತ್ತು ರವಿರನ್ನು ಬಂಧಿಸಲಾಗಿದ್ದು, ವಿಚಾರಣೆ ನಡೆಸಲಾಗುತ್ತಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net