

ಟೆನ್ನೆಸ್ಸಿ (ಅಮೆರಿಕ): ಇನ್ನೇನು ಪ್ರೇಮಿಗಳ ದಿನ ಬಂದೇ ಬಿಟ್ಟಿದೆ. ಫೆ.14 ಸಮೀಪ ಬರುತ್ತಿದ್ದಂತೆಯೇ ಪ್ರೇಮಿಗಳ ಹೃದಯದಲ್ಲಿ ಮಿಂಚಿನ ಸಂಚಾರ. ತಮ್ಮ ಪ್ರೇಮ ನಿವೇದನೆಗೆ ಈ ದಿನಕ್ಕಾಗಿ ಕಾಯುತ್ತಿರುವವರು ಅದೆಷ್ಟೋ ಮಂದಿ.
ಪ್ರೇಮಿಗಳ ದಿನದ ಪರಿಕಲ್ಪನೆ ಭಾರತದ್ದು ಅಲ್ಲದಿದ್ದರೂ, ಅಂದು ಭಾರತ ಸೇರಿದಂತೆ ಬಹುತೇಕ ಎಲ್ಲಾ ದೇಶಗಳಲ್ಲಿ ಬಗೆಬಗೆಯ ಆಫರ್ಗಳನ್ನು ನೀಡಲಾಗುತ್ತದೆ. ಆದರೆ ಒಂದು ವಿಚಿತ್ರ ರೀತಿಯ ಆಫರ್ ಅಮೆರಿಕದ ಟೆನ್ನೆಸ್ಸಿ ನೀಡಲು ಮುಂದಾಗಿದೆ.
ಕ್ರಾಸ್ವಿಲ್ಲೆಯಲ್ಲಿರುವ ನ್ಯಾಯಾಲಯದಲ್ಲಿ ಕಾನೂನು ಘಟಕವೊಂದರಲ್ಲಿ ಈ ಆಫರ್ ಇದೆ. ಅಂಥದ್ದೇನಪ್ಪ ಈ ಆಫರ್ ಎಂದರೆ ಓರ್ವ ದಂಪತಿಗೆ ಉಚಿತವಾಗಿ ಡಿವೋರ್ಸ್ ನೀಡಲಾಗುತ್ತಿದೆ! ಎಷ್ಟೋ ದಂಪತಿ ಈ ದಿನವನ್ನು ವಿಶೇಷವಾಗಿ ಆಚರಿಸುತ್ತಾರೆ. ಆದರೆ ಅಮೆರಿಕದ ಈ ಕೋರ್ಟ್ ಉಚಿತ ಕಾನೂನು ಸೇವೆಯ ಮೂಲಕ ಒಂದು ಜೋಡಿಗೆ ಉಚಿತವಾಗಿ ಡಿವೋರ್ಸ್ ನೀಡಲು ಮುಂದಾಗಿದೆ.
'ಪ್ರೇಮಿಗಳ ದಿನದಿಂದು ಓರ್ವ ಅದೃಷ್ಟಶಾಲಿಗೆ ಉಚಿತ ಡಿವೋರ್ಸ್' ಎಂಬ ಬೋರ್ಡ್ ಹಾಕಲಾಗಿದೆ. ಒಂದು ಡಿವೋರ್ಸ್ ಕೇಸ್ಗೆ ಭಾರತೀಯ ರೂಪಾಯಿ ಲೆಕ್ಕಾಚಾರದಲ್ಲಿ ಹೇಳುವುದಾದರೆ 80 ಸಾವಿರ ರೂಪಾಯಿ ಖರ್ಚಾಗುತ್ತದೆಯಂತೆ. ಆದರೆ ಕರೊನಾ ಸಂಕಷ್ಟದಿಂದಾಗಿ ಅನೇಕ ಮಂದಿ ಆರ್ಥಿಕವಾಗಿ ಕುಗ್ಗಿ ಹೋಗಿದ್ದಾರೆ. ಅವರಿಗೆ ಉತ್ತೇಜನ ನೀಡುವ ಸಲುವಾಗಿ ಓರ್ವ ಅದೃಷ್ಟಶಾಲಿಗೆ ಫೆ.14ರಂದು ಉಚಿತ ಡಿವೋರ್ಸ್ ನೀಡಲಾಗುವುದು ಎಂದು ಕೋರ್ಟ್ ಹೇಳಿದೆ.
ಈ ಬಗ್ಗೆ ಇದಾಗಲೇ ಸುತ್ತೋಲೆ ಹೊರಡಿಸಲಾಗಿದೆ. ಇದಕ್ಕೆ ಒಂದೆರಡು ಷರತ್ತು ಅನ್ವಯ ಮಾಡಲಾಗಿದೆ. ಅದೇನೆಂದರೆ ವಿಚ್ಛೇದನ ಪಡೆಯಲು ಆಸಕ್ತಿ ಹೊಂದಿರುವ ಜೋಡಿ ಇಂಥದ್ದೊಂದು ಇ-ಮೇಲ್ಗೆ ಮಾಹಿತಿ ನೀಡಬೇಕು. ಇಬ್ಬರ ಸಮ್ಮತಿ ಇರುವವರು ಮಾತ್ರ ಇದರಲ್ಲಿ ಭಾಗವಹಿಸಲು ಅರ್ಹರು. ಮಕ್ಕಳ ಕಸ್ಟಡಿ ವಿಚಾರವಾಗಿ ಗೊಂದಲ ಹೊಂದಿರುವ ದಂಪತಿ ಅಥವಾ ಇಬ್ಬರಲ್ಲಿ ಒಬ್ಬರು ಮಾತ್ರ ವಿಚ್ಛೇದನ ಬಯಸಿದರೆ ಅಂಥವರು ಈ ಪ್ರಕ್ರಿಯೆಯಲ್ಲಿ ಭಾಗಿಯಾಗುವಂತಿಲ್ಲ ಎಂದು ಸುತ್ತೋಲೆಯಲ್ಲಿ ಹೇಳಲಾಗಿದೆ.