ಆಧಾರ್​ ಕಾರ್ಡ್​ನಲ್ಲಿ ಕಾಣಿಸಿಕೊಂಡ್ತು ಫಿಷ್​ ಫ್ರೈ, ಮಟನ್, ಚಿಕನ್​,​ ಪಾಪಡ್​, ಐಸ್​​ಕ್ರೀಂ!

adharcard
Published on

ಕೋಲ್ಕತಾ: ಕೋಲ್ಕತಾದಲ್ಲಿ ಆಧಾರ್​ ಕಾರ್ಡ್​ ಇದೀಗ ಭಾರಿ ವೈರಲ್​ ಆಗಿದೆ. ಇದಕ್ಕೆ ಕಾರಣ, ಇದರಲ್ಲಿ ಎಲ್ಲಾ ಆಧಾರ್​ ಕಾರ್ಡ್​ನಲ್ಲಿ ಇರುವ ವ್ಯಕ್ತಿಯ ಮಾಹಿತಿಯ ಬದಲು ಫಿಷ್​ ಫ್ರೈ, ಮಟನ್​ ಕಾಷಾ, ಪಾಪಡ್​, ಐಸ್​​ಕ್ರೀಂ... ಹೀಗೆ ಮೆನು ಕಾಣಿಸಿಕೊಂಡಿದೆ.

ಅಷ್ಟಕ್ಕೂ ಇದು ನಿಜವಾದ ಆಧಾರ್​ ಕಾರ್ಡ್​ ಅಲ್ಲ. ಬದಲಿಗೆ ಮದುವೆಗೆ ಬರುವ ಅತಿಥಿಗಳಿಗೆ ಮದುವೆ ಮಂಟಪದಲ್ಲಿ ನೀಡಿರುವ ಊಟದ ಮೆನುಕಾರ್ಡ್​. ಈಗಿನ ಜೋಡಿಗಳಿಗೆ ಏನಾದರೂ ಹೊಸತನ್ನು ಮಾಡುವ ಹಂಬಲ. ಆದ್ದರಿಂದ ಲಗ್ನ ಪತ್ರಿಕೆಯನ್ನು ನೂತನ ವಿಧಾನದಲ್ಲಿ ಮಾಡಿದ್ದ ಈ ಜೋಡಿಗೆ, ಊಟದ ಮೆನುವನ್ನು ಕೂಡ ಹೊಸ ವಿಧಾನದಲ್ಲಿ ಮಾಡಬೇಕು ಎನ್ನಿಸಿ ಹೀಗೆ ಮಾಡಲಾಗಿದೆ. ಮದುವೆ ಊಟದ ಮೆನು ಕಾರ್ಡ್ ಅನ್ನು ಆಧಾರ್ ಕಾರ್ಡ್​ನಂತೆ ಪ್ರಿಂಟ್​ ಮಾಡಲಾಗಿದೆ.

ಇದನ್ನು ಮದುವೆಗೆ ಬರುವ ಅತಿಥಿಗಳಿಗೆ ನೀಡಲಾಗಿದೆ. ಮದುವೆ ಮನೆಯಲ್ಲಿ ಊಟದಲ್ಲಿ ಏನೆಲ್ಲಾ ವಿಶೇಷತೆಗಳು ಇರಲಿವೆ ಎಂದು ಮೆನು ನೋಡಿದರೆ ಅತಿಥಿಗಳಿಗೆ ತಿಳಿಯಲಿದೆ.

ಇಂಥದ್ದೊಂದು ವಿಶೇಷ ರೀತಿಯ ಕಾರ್ಡ್​ ಮುದ್ರಿಸಿ ವೈರಲ್​ ಆಗಿರುವ ಜೋಡಿಯ ಹೆಸರು ಗೊಗೋಲ್ ಸಹಾ ಮತ್ತು ಸುವರ್ಣ ದಾಸ್. ಈ ಕುರಿತು ಪ್ರತಿಕ್ರಿಯಿಸಿರುವ ಗೂಗೋಲ್, ಇದು ಸುವರ್ಣ ದಾಸ್ ಅವರ ಆಲೋಚನೆ. ನಾವಿಬ್ಬರೂ ಡಿಜಿಟಲ್ ಇಂಡಿಯಾಕ್ಕೆ ಪ್ರೋತ್ಸಾಹ ಕೊಡುವ ನಿಟ್ಟಿನಲ್ಲಿ ಆಧಾರ್ ಕಾರ್ಡ್ ಮಾದರಿಯ ಮೆನುವನ್ನು ಹಂಚಿದ್ದೇವೆ ಎಂದಿದ್ದಾರೆ.

ಇನ್ನೊಂದು ತಮಾಷೆ ಎಂದರೆ ಮದುವೆ ಮನೆಯಲ್ಲಿ ರಾಶಿರಾಶಿಯಾಗಿ ಬಿದ್ದಿರುವ ಈ ಕಾರ್ಡ್​ ನೋಡಿ, ಅಲ್ಲಿ ಬಂದವರೆಲ್ಲಾ ಅಯ್ಯೋ ಮದುವೆಗೆ ಬರುವಾಗ ಆಧಾರ್​ ಕಾರ್ಡ್​ ತರಬೇಕಿತ್ತೇನೋ ಎಂದು ಗೊಂದಲ ಆಗಿದ್ದೂ ಇದೆಯಂತೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net