

ಇಸ್ಲಮಾಬಾದ್: ಪಾಕಿಸ್ತಾನದಲ್ಲಿ ಹಿಂದೂ ಹುಡುಗಿಯರನ್ನು ಅಪಹರಣ ಮಾಡಿ ಅವರನ್ನು ಬಲವಂತದಿಂದ ಮತಾಂತರ ಮಾಡಲಾಗುತ್ತಿದೆ ಎಂಬ ಆರೋಪ ಇಂದು ನಿನ್ನೆಯದ್ದಲ್ಲ. ದಶಕಗಳಿಂದಲೇ ಇಂಥದ್ದೊಂದು ಆರೋಪ ಕೇಳಿಬರುತ್ತಿದ್ದರೆ ಅದನ್ನು ಪಾಕಿಸ್ತಾನ ಅಲ್ಲಗಳೆಯುತ್ತಲೇ ಬಂದಿತ್ತು. ಪಾಕಿಸ್ತಾನದಲ್ಲಿನ ಈ ಹೇಳಿಕೆಗೆ ಭಾರತದಲ್ಲಿನ ಕೆಲವು ವರ್ಗವೂ ಬೆಂಬಲಿಸುತ್ತಲೇ ಬಂದಿತ್ತು. ಆದರೆ ಸತ್ಯ ಒಂದಿಲ್ಲೊಂದು ದಿನ ಬಹಿರಂಗಗೊಳ್ಳಲೇಬೇಕು ಎನ್ನುವುದಕ್ಕೆ ಸಾಕ್ಷಿಯಾಗಿದೆ ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಅವರ ಈ ಮಾತು.
ಪಾಕಿಸ್ತಾನದಲ್ಲಿ ಯುವ ಮತ್ತು ಮುಸ್ಲಿಮೇತರ ಹುಡುಗಿಯರನ್ನು ಬಲವಂತವಾಗಿ ಇಸ್ಲಾಂಗೆ ಮತಾಂತರಿಸಲಾಗುತ್ತಿದೆ. ಹಿಂದೂ ಯುವತಿಯರನ್ನು ಅಪಹರಿಸಿ ಅವರನ್ನು ಬಲವಂತದಿಂದ ಮತಾಂತರಗೊಳಿಸಲಾಗುತ್ತಿದೆ ಎಂಬ ಬಗೆಗಿನ ಭಯಾನಕ ಸತ್ಯವನ್ನು ಇಮ್ರಾನ್ ಖಾನ್ ಬಾಯ್ಬಿಟ್ಟಿದ್ದಾರೆ.
ಅಲ್ಪಸಂಖ್ಯಾತರ ಸಮಾವೇಶದಲ್ಲಿ ಸಾರ್ವಜನಿಕರನ್ನು ಉದ್ದೇಶಿಸಿ ಅವರು ಮಾತನಾಡುತ್ತಿದ್ದರು. ಈ ಸಂದರ್ಭದಲ್ಲಿ ಪಾಕಿಸ್ತಾನದಲ್ಲಿ, ಅದರಲ್ಲಿಯೂ ಸಿಂಧ್ ಪ್ರಾಂತ್ಯದ ಕಹಿ ವಾಸ್ತವವನ್ನು ಅವರು ತೆರೆದಿಟ್ಟಿದ್ದಾರೆ. ಸಿಂಧ್ನಲ್ಲಿ ಹಿಂದೂ ಹುಡುಗಿಯರ ಬಲವಂತದ ಮತಾಂತರ ಮಾಡುತ್ತಿದ್ದಾರೆ ಎಂದು ಹೇಳಿದ ಅವರು, ಇದನ್ನು ತಾನು ಖಂಡಿಸುತ್ತಿದ್ದೇನೆ ಎಂದಿದ್ದಾರೆ.
ಕುರಾನ್ನಲ್ಲಿ ಮತಾಂತರದ ಕುರಿತು ಇರುವುದಾಗಿ ಹೇಳಲಾಗುತ್ತಿದೆ. ಆದರೆ ಇದು ಸತ್ಯವಲ್ಲ ಎಂದು ಹೇಳಿದ ಇಮ್ರಾನ್ ಖಾನ್, ಕುರಾನ್ನ ಒಂದು ಶ್ಲೋಕವನ್ನು ಹೇಳಿದರು. ಅದರಲ್ಲಿ ಇಸ್ಲಾಂನಲ್ಲಿ ಬಲವಂತಕ್ಕೆ ಅವಕಾಶವಿಲ್ಲ. ಯಾವುದೇ ಕಾರಣಕ್ಕೂ ಬಲವಂತವಾಗಿ ಮತಾಂತರ ಮಾಡಬಾರದು ಎಂದು ಕುರಾನ್ನಲ್ಲಿ ಹೇಳಲಾಗಿದೆ. ಇದು ಅಲ್ಲಾಹುವಿನ ಆಜ್ಞೆಯಾಗಿದೆ. ಒಂದು ವೇಳೆ ಯಾರಾದರೂ ಮುಸ್ಲಿಮೇತರರನ್ನು ಬಲವಂತವಾಗಿ ಮತಾಂತರಿಸಿದರೆ ಅಲ್ಲಾಹುವಿಗೆಗೆ ಅವಿಧೇಯರಾಗುತ್ತಾರೆ ಎಂದು ನುಡಿದರು.
2017 ರ ಜನಗಣತಿಯ ಪ್ರಕಾರ, ಪಾಕಿಸ್ತಾನದ ಒಟ್ಟು ಜನಸಂಖ್ಯೆಯ 2 ಪ್ರತಿಶತದಷ್ಟು ಹಿಂದೂಗಳು ಇದ್ದಾರೆ, ಅವರಲ್ಲಿ ಸುಮಾರು 90 ಪ್ರತಿಶತದಷ್ಟು ಜನರು ಭಾರತದ ಗಡಿಯಲ್ಲಿರುವ ಸಿಂಧ್ ಪ್ರಾಂತ್ಯದಲ್ಲಿ ವಾಸಿಸುತ್ತಿದ್ದಾರೆ. ಹಿಂದೂ ಯುವತಿಯರನ್ನು ಅದರಲ್ಲಿಯೂ ವಿಶೇಷವಾಗಿ ಅಲ್ಪಸಂಖ್ಯಾತ ಹಿಂದೂ ಹುಡುಗಿಯರ ಬಲವಂತದ ಮತಾಂತರದ ಬಗ್ಗೆ ಅನೇಕ ವರದಿಗಳಿವೆ. ಆದರೆ ಪಾಕಿಸ್ತಾನದ ಸರ್ಕಾರಗಳು ಮತ್ತು ರಾಜಕಾರಣಿಗಳು ಈ ವಿಷಯದಲ್ಲಿ ಯಾವಾಗಲೂ ಮೌನವಾಗಿದ್ದಾರೆ ಮತ್ತು ಸಮಸ್ಯೆಯನ್ನು ಪರಿಹರಿಸಲು ಎಂದಿಗೂ ಕೆಲಸ ಮಾಡಲಿಲ್ಲ ಎಂದೂ ಇಮ್ರಾನ್ ಇದೇ ವೇಳೆ ಆರೋಪಿಸಿದ್ದಾರೆ.
2021ರ ಅಕ್ಟೋಬರ್ನಲ್ಲಿ, ಅಲ್ಪಸಂಖ್ಯಾತ ಸಮುದಾಯಗಳ ಶಾಸಕರ ವಿರೋಧದ ಹೊರತಾಗಿಯೂ ಧಾರ್ಮಿಕ ವ್ಯವಹಾರಗಳ ಸಚಿವಾಲಯವು ಪ್ರಸ್ತಾಪಿಸಿದ ಕಾನೂನನ್ನು ವಿರೋಧಿಸಿದ ನಂತರ ಸಂಸತ್ತಿನ ಸಮಿತಿಯು ಬಲವಂತದ ಮತಾಂತರ ವಿರೋಧಿ ಮಸೂದೆಯನ್ನು ಸಂಸತ್ತಿನಲ್ಲಿ ಮಂಡಿಸಲು ಅನುಮತಿಸಲಿಲ್ಲ. (ಏಜೆನ್ಸೀಸ್)