ನವ ದಂಪತಿಗೆ ಸರ್ಕಾರದಿಂದ ಕಾಂಡೋಮ್​, ಗರ್ಭ ನಿರೋಧಕ ಮಾತ್ರೆ, ಗಿಫ್ಟ್​: ಕಿಟ್​ನಲ್ಲಿ ಇರಲಿವೆ ಇನ್ನೂ ಏನೇನೋ...

gift
Published on

ಒಡಿಶಾ: ಹೊಸದಾಗಿ ಮದುವೆಯಾದ ದಂಪತಿಗೆ ಕಾಂಡೋಮ್​ ಮತ್ತು ಗರ್ಭ ನಿರೋಧಕ ಮಾತ್ರೆಯನ್ನು ಉಚಿತವಾಗಿ ನೀಡಲು ಒಡಿಶಾ ಸರ್ಕಾರ ಮುಂದಾಗಿದೆ. ಜತೆಗೆ ಕನ್ನಡಿ, ಎರಡು ಟೆವಲ್, ಕರ್ಚಿಫ್​, ಬಾಚಣಿಗೆ ಜೊತೆಗೆ ಮ್ಯಾರೇಜ್ ಸರ್ಟಿಫಿಕೇಟ್ ಇತ್ಯಾದಿಗಳನ್ನೂ ನೀಡಲು ಸರ್ಕಾರ ಯೋಜನೆ ರೂಪಿಸಿದೆ.

ಕೇಂದ್ರ ಸರ್ಕಾರದ ಸಹಭಾಗಿತ್ವದೊಂದಿಗೆ ನವದಂಪತಿಗೆ ಗಿಫ್ಟ್​ ನೀಡುವ ಯೋಜನೆ ಇದಾಗಿದೆ. ಮಿಷನ್​ ಪರಿವಾರ್​ ವಿಕಾಸ್​ ಯೋಜನೆ ಅಡಿ ನಯೀ ಪಹಲ್​ (ಹೊಸ ದಾರಿ) ಅಥವಾ ನಬದಂಪತಿ (ಹೊಸ ದಂಪತಿ) ಹೆಸರಿನಡಿ ಈ ವಿಶೇಷ ಉಡುಗೊರೆಯನ್ನು ಸರ್ಕಾರ ನೀಡುತ್ತಿದೆ.

ಈ ಉಡುಗೊರೆಯ ಕಿಟ್‌ನಲ್ಲಿ ಉಚಿತ ಕಾಂಡೋಮ್, ಗರ್ಭನಿರೋಧಕ ಮಾತ್ರೆ, ಕನ್ನಡಿ, ಎರಡು ಟೆವಲ್, ಕರ್ಚೀಫ್, ಬಾಚಣಿಗೆ, ಉಗುರು ಕತ್ತರಿಸುವ ಚಿಕ್ಕ ಸಾಧನ ಜೊತೆಗೆ ಮ್ಯಾರೇಜ್ ಸರ್ಟಿಫಿಕೇಟ್ ಮಾತ್ರವಲ್ಲದೇ ಇನ್ನೂ ಹಲವು ವಿಶೇಷ ಉಡುಗೊರೆಗಳು ಇರಲಿವೆ ಎಂದಿದೆ ಸರ್ಕಾರ.

ರಾಜ್ಯದಲ್ಲಿ ಕುಟುಂಬ ಯೋಜನಾ ಕಾರ್ಯಕ್ರಮವನ್ನು ಬಲಪಡಿಸಲು ರಾಜ್ಯ ಸರ್ಕಾರವು ಕಿಟ್ ಅನ್ನು ವಿತರಿಸುತ್ತಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ನಿರ್ದೇಶಕ ಬಿಜಯ್ ಪಾಣಿಗ್ರಾಹಿ ಮಾಹಿತಿ ನೀಡಿದ್ದಾರೆ. ಈ ಕಿಟ್‌ನಲ್ಲಿ ಸುರಕ್ಷಿತ ಲೈಂಗಿಕತೆ, ಕುಟುಂಬ ಯೋಜನೆ ಸೇರಿದಂತೆ ಹಲವು ವಿಚಾರಗಳ ಕುರಿತು ಮಾಹಿತಿಗಳ ಕೈಪಿಡಿಯು ಇರಲಿದೆ. ನೂತನ ದಂಪತಿಗೆ ಆಶಾ ಕಾರ್ಯಕರ್ತರು ಈ ಕಿಟ್‌ಗಳನ್ನು ವಿತರಿಸುತ್ತಾರೆ, ಜತೆಗೆ ನವ ದಂಪತಿಗೆ ಕುಟುಂಬ ಯೋಜನೆಗಳ ಮಾಹಿತಿಯನ್ನು ಅವರು ನೀಡಲಿದ್ದಾರೆ.

ಮುಂದಿನ ತಿಂಗಳು ಸೆಪ್ಟೆಂಬರ್‌ನಲ್ಲಿ ಈ ಯೋಜನೆ ಒಡಿಶಾ ರಾಜ್ಯದಲ್ಲಿ ಜಾರಿಯಾಗಲಿದೆ ಎಂದು ಮೂಲಗಳು ತಿಳಿಸಿವೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net