

ಜಕಾರ್ತಾ (ಇಂಡೋನೇಷ್ಯಾ): ರಸ್ತೆಯ ತುಂಬೆಲ್ಲಾ ಕೆಂಪು ನೀರು ಹರಿದು ಜನರು ಬೆಚ್ಚಿಬಿದ್ದ ಘಟನೆ ಇಂಡೋನೇಷ್ಯಾದ ಜಕಾರ್ತಾದಲ್ಲಿ ನಡೆದಿದೆ.
ಈ ಪ್ರದೇಶದಲ್ಲಿ ಭಾರಿ ಮಳೆಯಾಗುತ್ತಿದ್ದು, ಸೆಂಟ್ರಲ್ ಜಾವಾದ ಪೆಕಲಂಗಾನ್ ಸಮೀಪದ ಜೆನ್ಗಾಟ್ ಎಂಬ ಗ್ರಾಮದಲ್ಲಿ ಪ್ರವಾಹ ಸಂಭವಿಸಿದೆ. ಇದರಿಂದಾಗಿ ರಸ್ತೆಯ ತುಂಬೆಲ್ಲಾ ನೀರು ನಿಂತಿವೆ. ಆದರೆ ರಕ್ತದಂತೆ ಕಂಡುಬಂದ ಕೆಂಪಾದ ನೀರು ರಸ್ತೆಗಳಲ್ಲಿ ಹರಿಯುತ್ತಿದ್ದುದರಿಂದ ಜನರು ಆತಂಕಗೊಂಡಿದ್ದಾರೆ.
ಇದರ ವಿಡಿಯೋ ಹಾಗೂ ಫೋಟೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಅಷ್ಟಕ್ಕೂ ಆಗಿದ್ದೇನೆಂದರೆ ಇಲ್ಲಿನ ಬಟೀಕ್ ಫ್ಯಾಕ್ಟರಿಯ ಡೈನೊಂದಿಗೆ ಬೆರೆತ ಪ್ರವಾಹದ ನೀರು ಕಡುಕೆಂಪು ಬಣ್ಣಕ್ಕೆ ತಿರುಗಿದೆ. ರಸ್ತೆಗಳ ಮೇಲೆ ಹರಿಯುತ್ತಿರುವ ನೀರು ಕೆಂಪಾಗಿ ರಕ್ತದಂತೆ ಭಾಸವಾಗಿದೆ.
ಈ ನಗರದ ಸುತ್ತಮುತ್ತಲಿನ ನದಿಗಳು ಬೇರೆ ಬೇರೆ ಬಣ್ಣಗಳಿಗೆ ತಿರುಗುವುದು ಹೊಸ ವಿಚಾರವಲ್ಲ. ಈ ಹಿಂದೆ ಕೂಡ ಬೇರೆ ಬೇರೆ ಕಾರಣಗಳಿಂದ ಇಲ್ಲಿ ಬೇರೆ ಬೇರೆ ಬಣ್ಣಗಳು ನೀರು ರಸ್ತೆಗಳಲ್ಲಿ ಹರಿಯುತ್ತವೆ. ಆದರೆ ಈ ಬಾರಿ ಥೇಟ್ ರಕ್ತದಂತೆ ಕಂಡುಬಂದಿದ್ದರಿಂದ ಜನರು ಅಚ್ಚರಿಗೊಂಡು, ಗಾಬರಿಯೂ ಆಗಿದ್ದಾರೆ. ಕಳೆದ ತಿಂಗಳು ಉಂಟಾದ ಪ್ರವಾಹದಿಂದ ನದಿಯೊಂದು ಹಸಿರು ಬಣ್ಣಕ್ಕೆ ತಿರುಗಿತ್ತು.