ಅಮ್ಮನ ದಿನದಂದೇ ಘೋರ ದುರಂತ: ಮಗನನ್ನು ರಕ್ಷಿಸಲು ಹೋದ ತಾಯಿಯ ಜತೆ ಐವರು ನೀರುಪಾಲು!

death
Published on

ಕಲ್ಯಾಣ (ಮಹಾರಾಷ್ಟ್ರ): ಇಂದು ಅಮ್ಮನ ದಿನ. ಆದರೆ ಇಂದೇ ಬೆಳ್ಳಂಬೆಳಗ್ಗೆ ಭಾರಿ ಅನಾಹುತವೊಂದು ಸಂಭವಿಸಿದ್ದು, ಒಂದೇ ಕುಟುಂಬದ ಐವರು ನೀರು ಪಾಲಾಗಿದ್ದಾರೆ. ಈ ದುರ್ಘಟನೆ ನಡೆದಿರುವುದು ಮಹಾರಾಷ್ಟ್ರದ ದೊಂಬಿವಿಲಿ ಸಮೀಪದ ಸಂದಾಪ ಗ್ರಾಮದಲ್ಲಿ.

ಬಟ್ಟೆ ತೊಳೆಯಲು ಹೋದ ಸಂದರ್ಭದಲ್ಲಿ ನೀರು ತುಂಬಿದ್ದ ಕ್ವಾರಿಯಲ್ಲಿ ಮುಳುಗಿ ಅತ್ತೆ, ಸೊಸೆ, ಇಬ್ಬರು ಮೊಮ್ಮಕ್ಕಳು ಹಾಗೂ ಅವರ ಓರ್ವ ಸಂಬಂಧಿ ಜಲಸಮಾಧಿಕಾರಿಯಾಗಿದ್ದಾರೆ.

ಅತ್ತೆ ಮೀರಾ ಗಾಯಕ್​ವಾಡ್ (55) ಅವರು ಸೊಸೆ ಅಪೇಕ್ಷಾ (30) ಜತೆ ಬಟ್ಟೆ ತೊಳೆಯಲು ಹೋಗಿದ್ದರು. ಈ ಸಂದರ್ಭದಲ್ಲಿ ಅಪೇಕ್ಷಾ ಅವರ ಮಕ್ಕಾದ ಮಯೂರೇಶ್ (15), ಮೋಕ್ಷಾ (15) ಜತೆಯಲ್ಲಿ ಇದ್ದರು. ಇವರ ಜತೆ ಸಂಬಂಧಿಕರಾದ ನಿಲೇಶ್ ಗಾಯಕ್​ವಾಡ್ (15) ಎಂಬ ಬಾಲಕ ಕೂಡ ಇದ್ದ.

ಬಟ್ಟೆ ತೊಳೆಯುವ ಸಂದರ್ಭದಲ್ಲಿ ಮಕ್ಕಳು ದಂಡೆಯ ಮೇಲೆ ಕುಳಿತಿದ್ದರು. ಬಾಲಕ ಆಯತಪ್ಪಿ ನೀರಿಗೆ ಬಿದ್ದಿದ್ದಾನೆ. ಆತನನ್ನು ರಕ್ಷಿಸಲು ಉಳಿದವರು ಹಾರಿಬಿಟ್ಟಿದ್ದಾರೆ. ಆದರೆ ಯಾರಿಗೂ ಸರಿಯಾದ ಈಜು ಬರದ ಕಾರಣ ಎಲ್ಲರೂ ಮೃತಪಟ್ಟಿದ್ದಾರೆ. ಸ್ಥಳೀಯರ ಮಾಹಿತಿ ಮೇರೆಗೆ ಅಗ್ನಿಶಾಮಕ ದಳದ ಸಿಬ್ಬಂದಿ ಆಗಮಿಸಿ ಶವಗಳನ್ನು ತೆಗೆದು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net