ಗೋವಾ ಕಾಂಗ್ರೆಸ್​ನಲ್ಲಿ ಮತ್ತೆ ಕೋಲಾಹಲ! ಬಿಜೆಪಿಯ ಕೈ ಹಿಡಿಯಲಿದ್ದಾರಾ ಎಂಟು ಶಾಸಕರು?

goa
Published on

ಗೋವಾ: ಕಾಂಗ್ರೆಸ್ ಪಕ್ಷವು ಪಕ್ಷಾಂತರ ಯತ್ನವನ್ನು ತಡೆದ ಎರಡು ತಿಂಗಳ ನಂತರ, ಗೋವಾದ ರಾಜಕೀಯದಲ್ಲಿ ಪುನಃ ಭಾರಿ ಕೋಲಾಹಲ ಉಂಟಾಗಿದೆ. ಗೋವಾದ 11 ಕಾಂಗ್ರೆಸ್​ನ ಶಾಸಕರ ಪೈಕಿ ಎಂಟು ಮಂದಿ ವಿಧಾನಸಭಾ ಸ್ಪೀಕರ್ ಅವರನ್ನು ಭೇಟಿಯಾಗಿರುವುದು ಇದೀಗ ಕುತೂಹಲಕ್ಕೆ ಕಾರಣವಾಗಿದೆ.

ಗೋವಾದಲ್ಲಿ 40 ಕ್ಷೇತ್ರಗಳ ಪೈಕಿ ಬಿಜೆಪಿ 20 ಸ್ಥಾನಗಳಲ್ಲಿ ಗೆಲುವು ದಾಖಲು ಮಾಡಿ ಪ್ರಮೋದ್ ಸಾವಂತ್​ ನೇತೃತ್ವದಲ್ಲಿ ಸರ್ಕಾರ ರಚನೆ ಮಾಡಿದೆ. ಎರಡನೇ ಅತಿದೊಡ್ಡ ಪಕ್ಷವಾಗಿದ್ದ ಕಾಂಗ್ರೆಸ್​ನ 8 ಶಾಸಕರು ಇಂದು ಬಿಜೆಪಿ ಸೇರ್ಪಡೆಯಾಗಲಿದ್ದಾರೆ ಎಂದು ರಾಜ್ಯ ಬಿಜೆಪಿ ಮುಖ್ಯಸ್ಥ ಸದಾನಂದ ಶೇಟ್ ತನವಾಡೆ ಮಾಹಿತಿ ನೀಡಿದ್ದಾರೆ.

ಮಾಜಿ ಮುಖ್ಯಮಂತ್ರಿ ದಿಗಂಬರ್ ಕಾಮತ್​​​, ವಿರೋಧ ಪಕ್ಷದ ನಾಯಕ ಮೈಕೆಲ್​ ಲೋಬೋ ಸೇರಿದಂತೆ ಎಂಟು ಕಾಂಗ್ರೆಸ್ ಶಾಸಕರು ಈಗಾಗಲೇ ಗೋವಾ ವಿಧಾನಸಭೆಗೆ ಆಗಮಿಸಿದ್ದು, ಎಲ್ಲರೂ ಒಟ್ಟಿಗೆ ಬಿಜೆಪಿ ಸೇರ್ಪಡೆಯಾಗಲಿದ್ದಾರೆ. ಹೀಗಾಗಿ, ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಕೂಡ ವಿಧಾನಸಭೆಗೆ ಆಗಮಿಸಿದ್ದಾರೆ ಎನ್ನಲಾಗುತ್ತಿದೆ.

ವಿಧಾನಸಭೆ ಕಲಾಪ ಇರದಿದ್ದರೂ ಸ್ಪೀಕರ್ ಜತೆ ಶಾಸಕರ ಭೇಟಿಯಾಗುತ್ತಿರುವುದು ಇಷ್ಟೆಲ್ಲಾ ಸುದ್ದಿಗಳಿಗೆ ಕಾರಣವಾಗಿದೆ. ಮಾಜಿ ಸಿಎಂ ದಿಗಂಬರ್ ಕಾಮತ್​, ಕಾಂಗ್ರೆಸ್ ಅಧ್ಯಕ್ಷ ಮೈಕೆಲ್​ ಲೋಬೋ, ದೇಲಿಲಾ ಲೋಬೋ, ರಾಜೇಶ್ ಫಾಲ್ದೇಸಾಯಿ, ಕೇದಾರ್ ನಾಯ್ಕ್​, ಸಂಕಲ್ಪ್​ ಅಮೋನ್ಕರ್​, ಅಲೆಕ್ಸೋ ಸಿಕ್ವೀರಾ, ಮತ್ತು ರುಡಾಲ್ಫ್​ ಫೆರ್ನಾಂಡಿಸ್. ಎಲ್ಲ ಶಾಸಕರು ಈಗಾಗಲೇ ಪ್ರಮೋದ್ ಸಾವಂತ್​ ಅವರನ್ನ ಭೇಟಿ ಮಾಡಿದ್ದಾರೆ.

ಈ ಪೈಕಿ ಎರಡು ತಿಂಗಳ ಹಿಂದೆಯಷ್ಟೇ ದಿಗಂಬರ ಕಾಮತ್, ಮೈಕೆಲ್ ಲೋಬೋ ಸೇರಿದಂತೆ ಕಾಂಗ್ರೆಸ್‌ನ ಆರು ಮಂದಿ ಶಾಸಕರು ಬಿಜೆಪಿ ಸೇರಲಿದ್ದಾರೆ ಎಂದು ವರದಿಯಾಗಿತ್ತು. ಪಕ್ಷಾಂತರ ವಿರೋಧಿ ಕಾನೂನಿನ ಅಡಿಯಲ್ಲಿ ಕಾಮತ್ ಮತ್ತು ಲೋಬೋ ಅವರನ್ನು ಅನರ್ಹಗೊಳಿಸುವಂತೆ ಕಾಂಗ್ರೆಸ್ ಸ್ಪೀಕರ್ ಅವರಲ್ಲಿ ಒತ್ತಾಯಿಸಿತ್ತು ಎನ್ನುವುದು ಇಲ್ಲಿ ಉಲ್ಲೇಖಾರ್ಹ.

ಕೆಲ ದಿನಗಳ ಹಿಂದೆ ಮಣಿಪುರದ ಐವರು ಜೆಡಿಯು ಶಾಸಕರು ಬಿಜೆಪಿ ಸೇರ್ಪಡೆಯಾಗಿದ್ದು, ನಿನ್ನೆ (ಮಂಗಳವಾರ) 15 ಜಿಲ್ಲಾ ಪಂಚಾಯ್ತಿ ಸದಸ್ಯರು ದಮನ್ ಮತ್ತು ದಿಯುನಲ್ಲಿ ಬಿಜೆಪಿ ಸೇರಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net