

ಅಹಮದಾಬಾದ್: ಇಂದು ನಸುಕಿನಿಂದಲೇ ಗುಜರಾತ್ನಲ್ಲಿ 19 ಬಾರಿ ಭೂಮಿ ಕಂಪಿಸಿದ್ದು, ಜನರು ಭಯಭೀತರಾಗಿರುವ ಘಟನೆ ನಡೆದಿದೆ.
ಗುಜರಾತಿನ ಗಿರ್ ಸೋಮನಾಥ್ ಜಿಲ್ಲೆಯ ಹಲವು ಭಾಗಗಳಲ್ಲಿ 1.7ರಿಂದ 3.3ರಷ್ಟು ತೀವ್ರತೆ ಹೊಂದಿದ್ದ 19 ಬಾರಿ ಭೂಮಿ ಕಂಪಿಸಿದೆ ಎಂದು ಭೂವಿಜ್ಞಾನ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
ಕಳೆದ ಜೂನ್ ತಿಂಗಳಿನಿಂದ ಅನೇಕ ಬಾರಿ ಗುಜರಾತ್ನ ವಿವಿಧ ಪ್ರದೇಶಗಳಲ್ಲಿ ಭೂಮಿ ಕಂಪಿಸುತ್ತಿರುವ ಹಿನ್ನೆಲೆಯಲ್ಲಿ ಯಾವಾಗ ಏನು ಅನಾಹುತ ಆಗುವುದೋ ಎಂಬ ಆತಂಕದಲ್ಲಿ ಜನರಿದ್ದಾರೆ.
ಗುಜರಾತಿನ ಸೌರಾಷ್ಟ್ರ ಪ್ರದೇಶದಲ್ಲಿ ಕಳೆದ ಎರಡು ಮೂರು ತಿಂಗಳಿನಿಂದ ಭಾರೀ ಮಳೆಯಾಗುತ್ತಿರುವುದರಿಂದ ಭೂ ಕಂಪನ ಸಂಭವಿಸಿರುವ ಸಾಧ್ಯತೆ ಇದ್ದು ಜನರು ಆತಂಕಕ್ಕೆ ಒಳಗಾಗುವ ಅವಶ್ಯಕತೆ ಇಲ್ಲ ಎಂದು ಅಧಿಕಾರಿಗಳು ಮನವಿ ಮಾಡಿಕೊಂಡಿದ್ದಾರೆ.
ಇಂದು ಘಟಿಸಿರುವ ಭೂಕಂಪನದಿಂದ ಯಾವುದೇ ಪ್ರಾಣ ಹಾಗೂ ಆಸ್ತಿ ಹಾನಿ ಆದ ಬಗ್ಗೆ ವರದಿಯಾಗಿಲ್ಲ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.
ಕಳೆದ ಜೂನ್ನಲ್ಲಿ ರಿಕ್ಟರ್ ಮಾಪಕದಲ್ಲಿ ಭೂಕಂಪನದ ತೀವ್ರತೆ 5.5ರಷ್ಟು ದಾಖಲಾಗಿತ್ತು. ರಾಜಕೋಟ್‌ನಿಂದ ವಾಯುವ್ಯದ ಉತ್ತರ ದಿಕ್ಕಿನ 122 ಕಿಮೀ ಅಂತರದಲ್ಲಿ ಕಂಪನ ಕೇಂದ್ರ ಬಿಂದು ಎಂದು ದಾಖಲಾಗಿತ್ತು. ಇಂದು ನಡೆದಿರುವ ಭೂಕಂಪದ ಬಗ್ಗೆ ಇನ್ನಷ್ಟು ಮಾಹಿತಿ ಕಲೆ ಹಾಕಲಾಗುತ್ತಿದೆ.