

ನ್ಯೂಯಾರ್ಕ್: ಚಿಂದಿ ಆಯುವವರು ಎಂದರೆ ಅದೆಷ್ಟು ತಾತ್ಸಾರದಿಂದ ನೋಡುತ್ತೇವೆ ಎಂದು ಎಲ್ಲರಿಗೂ ಗೊತ್ತಿರುವ ವಿಷಯವೇ. ಆದರೆ ಇಲ್ಲೊಬ್ಬ ಮಹಿಳೆ ಕಸದ ತೊಟ್ಟಿಯಿಂದಲೇ ಪ್ರತಿತಿಂಗಳು ಕೋಟಿ ಕೋಟಿ ಹಣ ಸಂಪಾದನೆ ಮಾಡುತ್ತಿದ್ದಾಳೆ ಎಂದರೆ ನಂಬಲು ಅಸಾಧ್ಯವೇ ಸರಿ.
ಇಂಥದ್ದೊಂದು ಪವಾಡ ನಡೀತಿರೋದು ನ್ಯೂಯಾರ್ಕ್‌ನಲ್ಲಿ. 32 ವರ್ಷದ ಟಿಫಾನಿ ಶೆರಿ ಎಂಬ ನಾಲ್ಕು ಮಕ್ಕಳ ತಾಯಿ ಇದೀಗ ಸಾಮಾಜಿಕ ಜಾಲತಾಣದಲ್ಲಿ ಭಾರಿ ಸುದ್ದಿಯಾಗಿದ್ದಾಳೆ. ಕ್ಯಾಂಟೀನ್ ಸರ್ವರ್ ಆಗಿದ್ದ ಈಕೆಗೆ ತನ್ನ ನಾಲ್ವರು ಮಕ್ಕಳ ಹೊಟ್ಟೆಯನ್ನು ಹೊರೆಯುವುದು ಭಾರಿ ಕಷ್ಟವಾಗಿತ್ತು. ಅದೊಂದು ದಿನ ಹೀಗೆ ದಾರಿಯಲ್ಲಿ ಹೋಗುತ್ತಿದ್ದಾಗ ಕಸದ ಬುಟ್ಟಿಯಲ್ಲಿ ಆಕೆಯ ಕಣ್ಣುನೆಟ್ಟಿದೆ ಅಷ್ಟೇ... ಅದೇ ಆಕೆಗೆ ಕೋಟ್ಯಧಿಪತಿಯನ್ನಾಗಿ ಮಾಡಿದೆ.
ತನ್ನ ಪೂರ್ಣಾವಧಿಯ ಕೆಲಸ ತೊರೆದು ಡಂಪ್‌ಸ್ಟರ್ ಡೈವರ್ (ಕಸದ ರಾಶಿಯಲ್ಲಿ ಮೌಲ್ಯದ ವಸ್ತುಗಳನ್ನು ಹುಡುಕುವುದು) ಆಗಿದ್ದಾಳೆ ಈಕೆ. ಈಗ ವಾರಕ್ಕೆ $1000ಕ್ಕೂ (ಸುಮಾರು 73 ಸಾವಿರ ರೂಪಾಯಿ) ಹೆಚ್ಚು ಸಂಪಾದಿಸುತ್ತಿದ್ದಾಳೆ. ಅದ್ಹೇಗೆ ಅಂತೀರಾ? ಕಸದ ಬುಟ್ಟಿಯಲ್ಲಿ ಬಿಸಾಡಿದ ವಸ್ತುಗಳನ್ನು ಮಾರಾಟ ಮಾಡುತ್ತಿದ್ದಾಳೆ ಈಕೆ.
ಆ ವಸ್ತುಗಳನ್ನು ಸಂಗ್ರಹಿಸಿ ಅದನ್ನು ಶುಚಿಗೊಳಿಸಿ ನಂತರ ಅದಕ್ಕೊಂದು ರೂಪ ಕೊಟ್ಟು ಅದನ್ನು ಮಾರಾಟ ಮಾಡುತ್ತಿದ್ದಾಳೆ. ಇವಳಿಗೆ ಪತಿ ಡೇನಿಯಲ್ ಕೂಡ ಸಾಥ್ ನೀಡಿದ್ದಾರೆ. ಇದೀಗ ತನ್ನ ಈ ಸಾಹಸಗಾಥೆಯನ್ನು ಶೆರಿ ಟಿಕ್ ಟಾಕ್‌ನಲ್ಲಿ ಕೂಡ ಹಂಚಿಕೊಂಡಿದ್ದಾಳೆ. ಮಾತ್ರವಲ್ಲದೇ 'ಡಂಪ್ ಸ್ಟರ್ ಡಿವಿಂಗ್ಮಾಮಾ' ಹೆಸರಿನಲ್ಲಿ ಇನ್ಸ್ಟಾಗ್ರಾಂ ಖಾತೆ ತೆರೆದು ಅದರಲ್ಲಿಯೂ ಸಾಹಸದ ಕಥನವನ್ನು ಹೇಳುತ್ತಾ ಇತರರಿಗೆ ಬದುಕುವ ದಾರಿ ತೋರುತ್ತಿದ್ದಾಳೆ.