

ಜಪಾನ್: ಟೋಕಿಯೋದಲ್ಲಿ ನಡೆಯುತ್ತಿರುವ ಪ್ಯಾರಾಲಿಂಪಿಕ್ಸ್‌ನಲ್ಲಿ ಭಾರತದ ಪದಕ ಬೇಟೆ ಭರ್ಜರಿಯಾಗಿ ಸಾಗಿದೆ. ದಾಖಲೆಯ ಪ್ರಮಾಣದಲ್ಲಿ ಪದಕ ತನ್ನದಾಗಿಸಿಕೊಂಡಿದೆ. ಈವರೆಗೆ ಏಳು ಪದಕಗಳು ಸಿಕ್ಕಿವೆ.
ಟೋಕಿಯೊ ಪ್ಯಾರಾಲಿಂಪಿಕ್ಸ್ ನಲ್ಲಿ ಸೋಮವಾರ ನಡೆದ ಪುರುಷರ ಜಾವೆಲಿನ್ ಥ್ರೋ ಅಂತಿಮ ಸ್ಪರ್ಧೆಯಲ್ಲಿ ಭಾರತದ ದೇವೇಂದ್ರ ಜಾಝಾರಿಯಾ ಬೆಳ್ಳಿ ಪದಕ ಗೆದ್ದರೆ, ಸುಂದರ್ ಸಿಂಗ್ ಗುರ್ಜಾರ್ ಅವರು ಕಂಚಿನ ಪದಕ ಗೆದ್ದಿದ್ದರೆ ಇದೀಗ ಡಿಸ್ಕಸ್ ಪಂದ್ಯದ F56 ವಿಭಾಗದಲ್ಲಿ ಯೋಗೀಶ್ ಕಥುನಿಯಾ ಬೆಳ್ಳಿ ಪದಕ ಗೆದ್ದಿದ್ದಾರೆ.
2004ರ ಅಥ್ಲೆನ್ಸ್ ಒಲಿಂಪಿಕ್ಸ್ ಹಾಗೂ 2016ರ ರಿಯೋ ಒಲಿಂಪಿಕ್ಸ್‌ನಲ್ಲಿ ಚಿನ್ನದ ಪದಕ ಗೆದ್ದಿದ್ದ ದೇವೇಂದ್ರ ಇದೀಗ ಮೂರನೇ ಪ್ಯಾರಾಲಿಂಪಿಕ್ಸ್ ಪದಕ ಗೆಲ್ಲುವಲ್ಲಿ ಯಶಸ್ವಿಯಾಗಿದ್ದಾರೆ. ತಮ್ಮ ವೃತ್ತಿಜೀವನದ ಶ್ರೇಷ್ಠ ದೂರವಾದ 64.35 ಮೀಟರ್ ದೂರ ಎಸೆಯುವ ಮೂಲಕ ರಜತ ಪದಕ ಪಡೆದುಕೊಂಡಿದ್ದಾರೆ. ಸುಂದರ್ ಸಿಂಗ್ ಗುರ್ಜರ್ 64.01 ಮೀಟರ್ ದೂರ ಎಸೆಯುವ ಮೂಲಕ ಕಂಚಿನ ಪದಕ ತಮ್ಮದಾಗಿಸಿಕೊಂಡಿದ್ದಾರೆ.
ಮಹಿಳಾ ವಿಭಾಗದ 10 ಮೀಟರ್ ಏರ್ ರೈಫಲ್‌ನಲ್ಲಿ ಅವಾನಿ ಲೇಖರಾ ಚಿನ್ನದ ಪದಕ ಗೆಲ್ಲುವ ಮೂಲಕ ಇತಿಹಾಸ ನಿರ್ಮಿಸಿದ್ದಾರೆ. ಜೈಪುರ ಮೂಲದ 19 ವರ್ಷದ ಅವನಿ ಲೆಖಾರಾ ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಈ ಬಾರಿ ಭಾಗವಹಿಸಿದ ಅತಿ ಕಿರಿಯ ಪ್ಯಾರಾ ಅಥ್ಲೀಟ್ ಎನಿಸಿಕೊಂಡಿದ್ದರು. ಇದೀಗ ಸ್ವರ್ಣ ಪದಕ ಬೇಟೆಯಾಡುವುದರೊಂದಿಗೆ ಪ್ಯಾರಾಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಚಿನ್ನದ ಪದಕ ಗೆದ್ದ ಭಾರತದ ಮೊದಲ ಮಹಿಳಾ ಕ್ರೀಡಾಪಟು ಎನ್ನುವ ದಾಖಲೆಯು ಅವನಿ ಪಾಲಾಗಿದೆ.