ಆಸ್ಪತ್ರೆಯ ಮೆತ್ತನೆಯ ಬೆಡ್​ ಮೇಲೆ ಹಾಯಾಗಿ ಮಲಗಿರುವ ಬೀದಿನಾಯಿ- ವಿಡಿಯೋ ವೈರಲ್​

dog
Published on

ಲಖನೌ: ರೋಗಿಗಳಿಗೇ ಬೆಡ್​ ಇಲ್ಲ ಎಂದು ಎಷ್ಟೋ ಬಾರಿ ಪರದಾಡುವುದು ಇದೆ. ಅಂಥದ್ದರಲ್ಲಿ ಉತ್ತರ ಪ್ರದೇಶದ ಆಸ್ಪತ್ರೆಯೊಂದರಲ್ಲಿ ಬೀದಿನಾಯಿ ಹಾಯಾಗಿ ಮಲಗಿಕೊಂಡಿದೆ. ಯಾವುದೇ ಟೆನ್ಷನ್​ ಇಲ್ಲದೇ, ಮೆತ್ತನೆಯ ಹಾಸಿಗೆಯ ಮೇಲೆ ಹಾಯಾಗಿ ನಾಯಿ ಮಲಗಿಕೊಂಡಿದ್ದು, ಅದರ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಭಾರಿ ಸದ್ದು ಮಾಡುತ್ತಿದೆ.

ಉತ್ತ ಪ್ರದೇಶದ ಸಿವಿಲ್​ ಲೈನ್ಸ್​ ಪ್ರದೇಶದಲ್ಲಿರುವ ದೀನ್​ ದಯಾಳ್​ ಉಪಾಧ್ಯಾಯ ಆಸ್ಪತ್ರೆಯಲ್ಲಿ ಈ ಘಟನೆ ನಡೆದಿದೆ. ಆಸ್ಪತ್ರೆಗಳ ಕುರಿತು ಅಲ್ಲಿಯ ಸಿಬ್ಬಂದಿ ಎಷ್ಟು ಕಾಳಜಿ ವಹಿಸುತ್ತಿದ್ದಾರೆ ಎನ್ನುವುದಕ್ಕೆ ಇದು ಹಿಡಿದ ಕನ್ನಡಿಯಾಗಿದ್ದು, ಸಾರ್ವಜನಿಕರಿಂದ ವಿಪರೀತ ಆಕ್ಷೇಪ ವ್ಯಕ್ತವಾಗುತ್ತಿದೆ.

ಆಸ್ಪತ್ರೆಯ ಎರಡನೆಯ ವಾರ್ಡ್​ನಲ್ಲಿ ಇಂಥದ್ದೊಂದು ಘಟನೆ ನಡೆದಿದೆ. ಇಲ್ಲಿರುವ ಶಸ್ತ್ರಚಿಕಿತ್ಸಾ ವಾರ್ಡ್​ನಲ್ಲಿ ಇರುವ ಹಾಸಿಗೆಯ ಮೇಲೆ ನಾಯಿ ಮಲಗಿದೆ. ಬೀದಿನಾಯಿಯೊಂದು ಎರಡನೆಯ ಮಹಡಿ ಹತ್ತಿ ಅಲ್ಲಿರುವ ವಾರ್ಡ್​ ಒಳಕ್ಕೆ ಹೋಗಿ, ಬೆಡ್​ ಏರಿ ಮಲಗುವವರೆಗೂ ಆಸ್ಪತ್ರೆಯ ಸಿಬ್ಬಂದಿ ಏನು ಮಾಡುತ್ತಿದ್ದರು? ಒಂದು ವೇಳೆ ಯಾರ ಗಮನಕ್ಕೂ ಬಾರದೇ ಅದು ಒಳಗೆ ಹೋಗಿದ್ದೇ ಆಗಿದ್ದರೆ, ಒಳಗೆ ಹೋದ ಮೇಲಾದರೂ ಯಾರೂ ಗಮನಿಸಿಲ್ಲವೆ ಎನ್ನುವುದು ಇದೀಗ ಪ್ರಶ್ನಾರ್ಥವಾಗಿದೆ.

ಈ ಹಿಂದೆ ಮಂಡ್ಯದ ಸರ್ಕಾರ ಆಸ್ಪತ್ರೆಯಲ್ಲಿಯೂ ಇಂಥದ್ದೊಂದು ಘಟನೆ ನಡೆದು ಅದು ಕೂಡ ಸಾಮಾಜಿಕ ಜಾಲತಾಣದಲ್ಲಿ ಭಾರಿ ಸುದ್ದಿ ಮಾಡಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net