ಶಸ್ತ್ರಸಜ್ಜಿತರಾಗಿ ಬಂದು ಬಂದೂಕು ತೋರಿದರೂ ಕಾದಾಡಿದ ಯುವಕರು: ವಿಡಿಯೋ ವೈರಲ್​

darode
Published on

ಅಂಬರನಾಥ್​ (ಮಹಾರಾಷ್ಟ್ರ): ಗನ್​, ಚೂರಿಗಳನ್ನು ತಂದು ನಿಮ್ಮ ಮುಂದೆ ಹಿಡಿದರೆ ಹೇಗಿರುತ್ತದೆ? ಇದನ್ನು ಕೇಳಿದರೇನೆ ಮೈಯೆಲ್ಲಾ ಝುಂ ಎನ್ನುತ್ತದೆ ಅಲ್ಲವೆ? ಆದರೆ ಶಸ್ತ್ರಸಜ್ಜಿತರಾಗಿ ಬಂದ ಡಕಾಯಿತರನ್ನು ಇಲ್ಲೊಂದು ಯುವಕರ ತಂಡ ಸದೆಬಡಿದು ಹೊಡೆದೋಡಿಸಿ ದಿಟ್ಟತನ ಮೆರೆದಿದೆ.

ಇದು ನಡೆದಿರುವುದು ಮಹಾರಾಷ್ಟ್ರದ ಅಂಬರ್‌ನಾಥ್‌ನಲ್ಲಿ. ಇಲ್ಲಿರುವ ಜ್ಯುವೆಲ್ಲರಿ ಅಂಗಡಿಗೆ ಈ ಡಕಾಯಿತರ ಗುಂಪು ಹಾಡ ಹಗಲೇ ನುಗ್ಗಿದೆ. ಮಧ್ಯಾಹ್ನ ಸುಮಾರು 1.30ರ ವೇಳೆ ಡಕಾಯಿತರು ನುಗ್ಗಿದ್ದಾರೆ. ಅವರು ಚಾಕು,ಚೂರಿ ಮಾತ್ರವಲ್ಲದೇ ಗನ್​ಗಳನ್ನೂ ತೆಗೆದುಕೊಂಡು ಬಂದಿದ್ದರು.

ಅಂಗಡಿ ಒಳಗೆ ನುಗ್ಗಿದ ಅವರು ಅಲ್ಲಿ ಇದ್ದ ಕೆಲಸಗಾರ 25 ವರ್ಷದ ಭೈರವ್ ಸಿಂಗ್​ನನ್ನು ಚೂರಿಯಿಂದ ತಿವಿದಿದ್ದಾರೆ. ಇದೇ ವೇಳೆ ಸಮೀಪವೇ ಇದ್ದ ಯುವಕರು ಮುಂದೆ ಆಗಬಹುದಾದ ಅನಾಹುತವನ್ನು ತಪ್ಪಿಸಲು ಗನ್​, ಚೂರಿಗಳನ್ನೂ ಲೆಕ್ಕಿಸದೇ ಮುನ್ನುಗ್ಗಿದ್ದಾರೆ. ಡಕಾಯಿತರ ಮೇಲೆ ಹಲ್ಲೆ ಮಾಡಿದ್ದಾರೆ. ಇವರು ಈ ರೀತಿ ಮಾಡುತ್ತಿದ್ದಂತೆಯೇ ಕೆಲವು ಸ್ಥಳೀಯರೂ ಸೇರಿಕೊಂಡಿದ್ದಾರೆ.

ಈ ಘಟನೆಯಲ್ಲಿ ಕೆಲವರಿಗೆ ಗಾಯಗಳಾಗಿವೆ. ಜನರನ್ನು ಕಂಡು ದರೋಡೆಕೋರರು ಓಡಿ ಹೋಗಿದ್ದಾರೆ. ಆದರೆ ಹೋಗುವ ಮುನ್ನ ತಾವು ತಂದಿದ್ದ ಗನ್​ನಿಂದ ಶೂಟ್​ ಮಾಡಿದ್ದಾರೆ. ಇದರಿಂದಾಗಿ ಇಬ್ಬರು ಸ್ಥಳೀಯರು ಗಂಭೀರವಾಗಿ ಗಾಯಗೊಂಡಿದ್ದಾರೆ. ಈ ಸಂಪೂರ್ಣ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಭೈರವ್ ಸಿಂಗ್​ನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net