ನಾಯಿಗಳು ಕಚ್ಚಿ ತಿಂದ ಕರೊನಾ ಸೋಂಕಿತನ ಶವ!

corona-dog
Published on

ಹೈದರಾಬಾದ್: ಇಲ್ಲಿಯ ರಾಜೀವ್ ಗಾಂಧಿ ಇನ್‌ಸ್ಟಿಟ್ಯೂಟ್‌ ಆಫ್ ಮೆಡಿಕಲ್ ಸೈನ್ಸಸ್ (ರಿಮ್ಸ್) ಬಳಿ ಇರುವ ನಿರಾಶ್ರಿತರ ಕೇಂದ್ರದಲ್ಲಿ ವ್ಯಕ್ತಿಯೊಬ್ಬನ ಮೃತದೇಹವನ್ನು ನಾಯಿಗಳು ಕಚ್ಚಿ ತಿಂದಿರುವ ಆಘಾತಕಾರಿ ಘಟನೆ ನಡೆದಿದೆ.

ಮೃತನನ್ನು ಪ್ರಕಾಶಂ ಜಿಲ್ಲೆಯ ಜರುಗುಮಲ್ಲಿ ಮಂಡಲದ ಬಿಟ್ರಗುಂಟ ಗ್ರಾಮದ ನಿವಾಸಿ ಕಾಂತ ರಾವ್ ಎಂದು ಗುರುತಿಸಲಾಗಿದೆ.

ಈತ ಕರೊನಾ ಸೋಂಕಿತನಾಗಿರುವ ಶಂಕೆಯನ್ನು ಅಲ್ಲಿಯ ಜನರು ವ್ಯಕ್ತಪಡಿಸಿದ್ದಾರೆ. ನಿರಾಶ್ರಿತರು ಹಾಗೂ ಬಡವರಿಗಾಗಿ ಇಲ್ಲಿ ಶೆಡ್‌ಗಳನ್ನು ನಿರ್ಮಿಸಲಾಗಿದ್ದು, ಅಲ್ಲಿ ಈ ವ್ಯಕ್ತಿ ವಾಸವಾಗಿದ್ದ. ಕರೊನಾ ಸೋಂಕಿನಿಂದ ಈತ ಮೃತಪಟ್ಟಿರುವುದಾಗಿ ಸ್ಥಳೀಯರು ಹೇಳುತ್ತಿದ್ದಾರೆ. ಅದರೆ ಈ ಬಗ್ಗೆ ಇನ್ನಷ್ಟೇ ವರದಿ ಹೊರಬೀಳಬೇಕಿದೆ.

ಮೃತ ವ್ಯಕ್ತಿಯ ಮುಖಕ್ಕೆ ನಾಯಿ ಕಚ್ಚಿ ಗಾಯ ಮಾಡಿದೆ ಹಾಗೂ ಶವದ ಕಿವಿ ಭಾಗ ಕಾಣೆಯಾಗಿದೆ. ಬೀದಿ ನಾಯಿಗಳು ಮೃತದೇಹದ ಕಿವಿಯನ್ನು ತಿನ್ನುತ್ತಿರುವುದದನ್ನು ಆಸ್ಪತ್ರೆಯ ಭದ್ರತಾ ಸಿಬ್ಬಂದಿ ನೋಡಿದ್ದ.

ಈ ಘಟನೆಗೆ ರಿಮ್ಸ್ ವೈದ್ಯರ ನಿರ್ಲಕ್ಷ್ಯವೇ ಕಾರಣ ಎಂದು ಆರೋಪಿಸಿ ಕಾಂತ ರಾವ್ ಅವರ ಸಂಬಂಧಿಕರು ಆಸ್ಪತ್ರೆ ಮುಂದೆ ಪ್ರತಿಭಟನೆ ನಡೆಸಿದ್ದಾರೆ. ಆದರೆ ಈ ವ್ಯಕ್ತಿ ಇದಕ್ಕೂ ಮುಂಚೆ ಆಸ್ಪತ್ರೆಗೆ ದಾಖಲಾಗಿರಲಿಲ್ಲ ಎಂದು ವೈದ್ಯರು ಹೇಳುತ್ತಿದ್ದಾರೆ. ಒಟ್ಟಿನಲ್ಲಿ ಸತ್ಯಾಂಶ ಹೊರಬರಬೇಕಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net