ಏನೋ ಮಾಡಲು ಹೋಗಿ ಮಾಡಬಾರದ್ದನ್ನು ಮಾಡಿ ದಿಶಾಳನ್ನು ಸಂಕಷ್ಟಕ್ಕೆ ಸಿಲುಕಿಸಿದ ಗ್ರೇಟಾ ಮಾಡಿದಳೊಂದು ಟ್ವೀಟ್‌...

toolkit
Published on

ನವದೆಹಲಿ: ರೈತರ ಪ್ರತಿಭಟನೆಯ ಹೆಸರಿನಲ್ಲಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತಕ್ಕೆ ಹೇಗೆ ಕಪ್ಪುಮಸಿ ಬಳಿಯಬೇಕು ಎಂಬ ಬಗ್ಗೆ ವಿಸ್ತಾರವಾಗಿ ಉಲ್ಲೇಖವಾಗಿದ್ದ ಟೂಲ್‌ಕಿಟ್‌ನಿಂದ ಪರಿಸರವಾದಿ ದಿಶಾ ರವಿ ಸಿಕ್ಕಿಬಿದ್ದು ಸದ್ಯ ಬಂಧನದಲ್ಲಿ ಇದ್ದಾಳೆ.

ಅಂತಾರಾಷ್ಟ್ರೀಯ ಮಟ್ಟದಲ್ಲಿ ಪರಿಸರವಾದಿ ಎಂದು ಹೆಸರು ಮಾಡಿರುವ ಗ್ರೇಟಾ ಥನ್‌ಬರ್ಗ್‌, ರೈತರ ಪ್ರತಿಭಟನೆಯ ಸಂದರ್ಭದಲ್ಲಿ ಮಾಡಿದ ಒಂದು ಎಡವಟ್ಟಿನ ಕೆಲಸದಿಂದಾಗಿ ಟೂಲ್‌ಕಿಟ್‌ ಹಗರಣ ಇದೀಗ ಪಾಕಿಸ್ತಾನವೂ ಸೇರಿದಂತೆ ಭಾರತದ ಕೆಲವರನ್ನು ಪೇಚಿಗೆ ಸಿಲುಕಿಸಿಬಿಟ್ಟಿದೆ.

ಗಣರಾಜ್ಯೋತ್ಸವದ ಸಂದರ್ಭದಲ್ಲಿ ರೈತರ ಹೆಸರಿನಲ್ಲಿ ನಡೆಯುತ್ತಿದ್ದ ಹಿಂಸಾಚಾರದ ವೇಳೆ ಟೂಲ್‌ಕಿಟ್‌ ಟ್ವೀಟ್‌ ಮಾಡಿದ್ದ ಗ್ರೇಟಾ ಥನ್‌ಬರ್ಗ್‌ ನಂತರ ಅದನ್ನು ಡಿಲೀಟ್‌ ಮಾಡಿದ್ದಳು. ಇದರಲ್ಲಿ ಮುಗ್ಧ ರೈತರ ಹೆಸರಿನಲ್ಲಿ ಹೇಗೆಲ್ಲಾ ಹಿಂಸಾಚಾರ ಮಾಡಬಹುದು ಎಂಬುದು ದಾಖಲಾಗಿತ್ತು ಎನ್ನುವ ಆರೋಪವಿದೆ. ಗ್ರೇಟಾ ಅದನ್ನು ಡಿಲೀಟ್‌ ಮಾಡಿದ್ದರೂ, ಅದಾಗಲೇ ಅದು ಸಾಕಷ್ಟು ವೈರಲ್‌ ಆಗಿಹೋಗಿ, ದಿಶಾ ರವಿಯ ಬಂಧನಕ್ಕೂ ಕಾರಣವಾಗಿದೆ.

ಈ ಘಟನೆ ನಡೆದು ತಿಂಗಳಾಗುತ್ತಾ ಬಂದ ಮೇಲೆ ಇದೇ ಮೊದಲ ಬಾರಿಗೆ ಕನ್ನಡತಿ ದಿಶಾ ರವಿಯ ಬಂಧನದ ಬಗ್ಗೆ ಸ್ವೀಡಿಶ್ ಯುವತಿ ಗ್ರೇಟಾ ಬಾಯಿ ಬಿಟ್ಟಿದ್ದಾಳೆ. ಈ ಕುರಿತು ಟ್ವೀಟ್‌ ಮಾಡಿರುವ ಗ್ರೇಟಾ, 'ಸ್ಟ್ಯಾಂಡ್ ವಿತ್ ದಿಶಾ ರವಿ' ಎಂದು ಹ್ಯಾಷ್‌ಟ್ಯಾಗ್‌ ಹಾಕಿಕೊಂಡು, 'ಅಭಿವ್ಯಕ್ತಿ ಸ್ವಾತಂತ್ರ್ಯ ಮತ್ತು ಶಾಂತಿಯುತ ಪ್ರತಿಭಟನೆಯ ಹಕ್ಕನ್ನು ಯಾರೂ ಕಸಿದುಕೊಳ್ಳಲು ಸಾಧ್ಯವಿಲ್ಲ. ಇವೆಲ್ಲವೂ ಯಾರೂ ಕಸಿದುಕೊಳ್ಳಲು ಸಾಧ್ಯವಿಲ್ಲದ ಮಾನವಹಕ್ಕುಗಳು. ನಾವು ನಮ್ಮ ಯೋಜನೆಯಲ್ಲಿ ಅಚಲವಾಗಿದ್ದೇವೆ. ನಮ್ಮ ಪರಿಸರವನ್ನು ರಕ್ಷಿಸುವ ಗುರಿಯನ್ನು ಹೊಂದಿದ್ದೇವೆ’. ಫ್ರೈಡೇಸ್‌ ಫಾರ್‌ ಫ್ಯೂಚರ್ ಇಂಡಿಯಾ ಹಾಕಿಕೊಂಡಿರುವ ಇದೇ ಹೇಳಿಕೆಯನ್ನು ಟ್ಯಾಗ್‌ ಮಾಡಿಕೊಂಡು ದಿಶಾ ರವಿಯ ಪರವಾಗಿ ಇರುವುದಾಗಿ ಗ್ರೇಟಾ ಹೇಳಿದ್ದಾಳೆ. ಆದರೆ ಬಂಧನದ ಕುರಿತು ನೇರವಾಗಿ ಯಾವುದೇ ಪ್ರತಿಕ್ರಿಯೆ ನೀಡಲಿಲ್ಲ.

ಟೂಲ್ ಕಿಟ್ ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗಿರುವ ದಿಶಾ ರವಿಯನ್ನು ದೆಹಲಿಯ ಪಟಿಯಾಲಾ ಹೌಸ್ ನ್ಯಾಯಾಲಯವು ವಿಚಾರಣೆ ಬಳಿಕ ಮೂರು ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ.

ಕ್ಷಣಕ್ಷಣದ ಮಾಹಿತಿಗಾಗಿ ವಿಜಯವಾಣಿ ಫೇಸ್​ಬುಕ್​ ಪೇಜ್​ ಲೈಕ್ಸ್​ ಮಾಡಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net