ಉನ್ನಾವ್‌- ದಲಿತ ಬಾಲಕಿಯರ ಸಾವಿನ ಕೇಸ್‌ಗೆ ಟ್ವಿಸ್ಟ್‌: ಕೊನೆಗೂ ಸತ್ಯ ಬಾಯಿ ಬಿಟ್ಟ ಯುವಕ

unnav
Published on

ಉನ್ನಾವ್‌ (ಉತ್ತರ ಪ್ರದೇಶ): ಜಾನುವಾರುಗಳಿಗೆ ಮೇವು ತರಲು ತೆರಳಿದ್ದ ಇಬ್ಬರು ದಲಿತ ಬಾಲಕಿಯರು ನಿಗೂಢವಾಗಿ ಮೃತಪಟ್ಟಿದ್ದರೆ, ಇನ್ನೊಬ್ಬ ಬಾಲಕಿ ಗಂಭೀರ ಸ್ಥಿತಿಯಲ್ಲಿ ಇದ್ದ ಘಟನೆ ಉತ್ತರ ಪ್ರದೇಶದ ಉನ್ನಾವ್‌ನಲ್ಲಿ ಇದೇ 17ರಂದು (ಮಂಗಳವಾರ) ನಡೆದಿತ್ತು.

ಮೇವು ತರುವುದಕ್ಕಾಗಿ ಅರಣ್ಯಕ್ಕೆ ತೆರಳಿದ್ದ ಮೂವರು ಹುಡುಗಿಯರು ಮನೆಗೆ ಹಿಂದಿರುಗದ ಕಾರಣ, ಸ್ಥಳೀಯ ಗ್ರಾಮಸ್ಥರು ಅವರಿಗಾಗಿ ಹುಡುಕಾಟ ಆರಂಭಿಸಿದ್ದರು. ಬುಧವಾರ ರಾತ್ರಿ ಗ್ರಾಮದ ಸಮೀಪದ ಜಮೀನಿನಲ್ಲಿ ಇಬ್ಬರು ಹುಡುಗಿಯರು ಶವವಾಗಿ ಪತ್ತೆಯಾದರೆ, ಒಬ್ಬ ಹುಡುಗಿ ಗಂಭೀರವಾಗಿ ಅಸ್ವಸ್ಥಗೊಂಡಿದ್ದಳು.

ಅಶೋಹಾ ಪೊಲೀಸ್ ಠಾಣಾ ವ್ಯಾಪ್ತಿಯ ಬಾಬುರಾಹ ಗ್ರಾಮದ ಹೊಲದಲ್ಲಿ ಈ ಘಟನೆ ನಡೆದಿದ್ದು, ಅಸ್ವಸ್ಥಗೊಂಡಿರುವ ಬಾಲಕಿಯನ್ನು ಆಸ್ಪತ್ರೆಗೆ ಸಾಗಿಸಲಾಗಿದ್ದು ಚಿಕಿತ್ಸೆ ನೀಡಲಾಗುತ್ತಿದೆ.

ಇದು ಕೊಲೆಯೋ, ಸಹಜ ಸಾವೋ ಎಂಬ ಬಗ್ಗೆ ಅನುಮಾನ ಶುರುವಾಗಿತ್ತು. ಇದು ಕೊಲೆ ಎಂದು ಕೆಲವರು ಹೇಳುತ್ತಿದ್ದರೆ, ಇನ್ನು ಕೆಲವರು ಇದು ಸಹಜ ಸಾವು ಎಂದಿದ್ದರು. ಮೇಲ್ನೋಟಕ್ಕೆ ಇದು ಕೊಲೆಯಂತಿದೆ ಎಂದು ಪೊಲೀಸರು ಪ್ರಕರಣ ದಾಖಲಿಸಿದ್ದರು. ಬಾಲಕಿಯರ ಮೇಲೆ ಯಾವುದೇ ರೀತಿಯ ಲೈಂಗಿಕ ದೌರ್ಜನ್ಯ ನಡೆದಿರಲಿಲ್ಲ. ಮೃತಪಟ್ಟಿರುವ ಬಾಲಕಿಯರ ಬಾಯಲ್ಲಿ ಬಿಳಿ ನೊರೆ ಕಾಣಿಸಿಕೊಂಡಿದ್ದರಿಂದ ಹಾವು ಕಚ್ಚಿರಬಹುದೆಂದು ಗ್ರಾಮಸ್ಥರು ಸಂಶಯ ಪಟ್ಟಿದ್ದರು.

ಆದರೆ, ಇದೀಗ ಈ ಸಾವಿನ ರಹಸ್ಯ ಬಯಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ವಿನಯ್‌ ಎಂಬ ಯುವಕನೊಬ್ಬನನ್ನು ಪೊಲೀಸರು ಬಂಧಿಸಿದ್ದು, ಆತ ಸತ್ಯವನ್ನು ಬಹಿರಂಗಪಡಿಸಿದ್ದಾನೆ.

ಆರೋಪಿ ಹೇಳಿದ್ದೇನು?
ಅಸಲಿಗೆ ಇದು ಸಹಜ ಸಾವಲ್ಲ, ಬದಲಿಗೆ ತಾನು ಮಾಡಿರುವ ಕೊಲೆ ಎಂದು ಆರೋಪಿ ವಿನಯ್‌ ಒಪ್ಪಿಕೊಂಡಿದ್ದಾನೆ. ಅಷ್ಟಕ್ಕೂ ಈ ಕೊಲೆ ಮಾಡಲು ಕಾರಣ, ಭಗ್ನಪ್ರೇಮ. ವಿನಯ್‌ ಮೃತಪಟ್ಟಿರುವ ಬಾಲಕಿಯ ಪೈಕಿ ಒಬ್ಬಳನ್ನು ಪ್ರೀತಿಸುತ್ತಿದ್ದ. ಲಾಕ್ ಡೌನ್ ವೇಳೆ ಪರಿಚಿತರಾಗಿದ್ದರು, ಪರಿಚಯ ಸ್ನೇಹವಾಗಿ ತಿರುಗಿತ್ತು. ಇಬ್ಬರೂ ಪ್ರತಿನಿತ್ಯ ಊರ ಹೊರಗಿನ ಜಮೀನಿನಲ್ಲಿ ಭೇಟಿಯಾಗುತ್ತಿದ್ದರಂತೆ.

ಹೀಗೆ ಕರೆದಾಗಲೆಲ್ಲಾ ಬರುತ್ತಿದ್ದ ಬಾಲಕಿಗೂ ತನ್ನ ಮೇಲೆ ಪ್ರೀತಿ ಇರುವುದಾಗಿ ಭಾವಿಸಿದ್ದ ಯುವಕ, ಆಕೆಯನ್ನು ಪ್ರೀತಿ ಮಾಡಲು ಶುರು ಮಾಡಿದ್ದ. ಒಂದು ದಿನ ಅವಳು ಭೇಟಿಯಾಗಲು ಬಂದಾಗ ವಿಷಯ ಪ್ರಸ್ತಾಪಿಸಿದ್ದಾನೆ. ಆದರೆ ಆಕೆ ನಿರಾಕರಿಸಿದ್ದಾಳೆ. ಇದರಿಂದ ಯುವಕನಿಗೆ ಸಿಟ್ಟುಬಂದಿದೆಯಂತೆ.

ಮೊನ್ನೆ, ಆ ಬಾಲಕಿ ತನ್ನ ಇನ್ನಿಬ್ಬರು ಸಂಬಂಧಿಕರಾಗಿರುವ ಬಾಲಕಿಯರ ಜತೆ ತೋಟಕ್ಕೆ ಹೋಗಿದ್ದಾರೆ. ಈ ವೇಳೆ ಭಗ್ನಪ್ರೇಮದಿಂದ ಸಿಟ್ಟಿಗೆದ್ದಿದ್ದ ಯುವಕ, ತನ್ನ ಪ್ರೀತಿ ನಿರಾಕರಿಸಿದ್ದ ಬಾಲಕಿಯ ಕೊಲೆಗೆ ಸಂಚುರೂಪಿಸಿದ್ದ. ಆಕೆಗೆಂದು ಒಂದಿಷ್ಟು ತಿಂಡಿ ತಂದಿದ್ದ, ನೀರು ಕೂಡ ತಂದಿದ್ದ, ಆದರೆ ನೀರಿನಲ್ಲಿ ಕೀಟನಾಶಕ ಬೆರೆಸಿದ್ದ. ಬಾಲಕಿಯ ಜತೆ ಇನ್ನಿಬ್ಬರು ಇದ್ದುದ್ದನ್ನು ಕಂಡ ಆತ ಅವರಿಗೂ ಇದನ್ನು ನೀಡಿದ್ದ. ಕ್ರಿಮಿನಾಶಕ ಇರುವ ನೀರನ್ನು ಕುಡಿದು ಇಬ್ಬರು ಮೃತಪಟ್ಟರೆ, ಒಬ್ಬಾಕೆಯ ಸ್ಥಿತಿ ಗಂಭೀರವಾಗಿದೆ.

ಪೊಲೀಸರು ಆರೋಪಿಯ ಹೇಳಿಕೆಯನ್ನು ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ಈ ಘಟನೆಯಿಂದಾಗಿ ಇಡೀ ಗ್ರಾಮದ ಜನರಲ್ಲಿ ಆಕ್ರೋಶ ವ್ಯಕ್ತವಾಗಿತ್ತು. ಇದು ಅನೇಕ ತಿರುವುಗಳನ್ನು ಕೂಡ ಪಡೆದುಕೊಂಡಿತ್ತು. ಆದ್ದರಿಂದ ಹಿರಿಯ ಅಧಿಕಾರಿಗಳು ಮತ್ತು ಪೊಲೀಸ್ ಸಿಬ್ಬಂದಿ ಸಮ್ಮುಖದಲ್ಲಿ ಕುಟುಂಬದವರಿಗೆ ಸೇರಿದ ಜಮೀನಿನಲ್ಲಿ ಮೃತ ಕೋಮಲ್ (15) ಮತ್ತು ಕಾಜಲ್ (14) ಅವರ ಅಂತ್ಯಕ್ರಿಯೆ ನಡೆಸಲಾಗಿದೆ.

ಕ್ಷಣಕ್ಷಣದ ಮಾಹಿತಿಗಾಗಿ ವಿಜಯವಾಣಿ ಫೇಸ್​ಬುಕ್​ ಪೇಜ್​ ಲೈಕ್ಸ್​ ಮಾಡಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net