

ಬೆಳಗಾವಿ: ನಿನ್ನೆಯಿಂದ ರಾಜ್ಯದ ಕೆಲವು ಕಡೆಗಳಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆಗೆ ಜನಜೀವನ ಅಸ್ತವ್ಯಸ್ತಗೊಂಡಿದೆ. ಹಾವೇರಿ, ಕೊಪ್ಪಳ, ಗದಗ, ಬೆಳಗಾವಿ, ಮೈಸೂರು, ತುಮಕೂರು, ಮಂಡ್ಯ, ಚಿತ್ರದುರ್ಗ, ಧಾರವಾಡ ಸೇರಿದಂತೆ ಅನೇಕ ಸ್ಥಳಗಳಲ್ಲಿ ಹಗುರದಿಂದ ಭಾರಿ ಪ್ರಮಾಣದ ಮಳೆಯಾಗುತ್ತಿದೆ.
ಬೆಳಗಾವಿಯಲ್ಲಿ ಗುಡುಗು ಸಹಿತ ಮಳೆಯಾಗಿದ್ದು, ಸಿಡಿಲು ಬಡಿದು ಯುವಕನೊಬ್ಬ ಮೃತಪಟ್ಟಿದ್ದಾನೆ. 20 ವರ್ಷದ ಗುರುನಾಥ ನಾರ್ವೇಕ ಸಿಡಿಲಿಗೆ ಬಲಿಯಾಗಿದ್ದು, ಈ ಘಟನೆ ಬೆಳಗಾವಿ ಜಿಲ್ಲೆ ಖಾನಾಪುರ ತಾಲೂಕಿನ ನಿಡಗಲ್ ಗ್ರಾಮದ ಇಟ್ಟಂಗಿ ಭಟ್ಟಿಯಲ್ಲಿ ನಡೆದಿದೆ.
ಉತ್ತರ ಕನ್ನಡ ಜಿಲ್ಲೆ ಜೋಯಿಡಾ ತಾಲೂಕಿನ ಅಸು ಗ್ರಾಮದಿಂದ ಗುರುನಾಥ ಕೆಲಸಕ್ಕಾಗಿ ಕೆಲ ದಿನಗಳ ಹಿಂದೆ ನಿಡಗಲ್ಗೆ ಆಗಮಿಸಿದ್ದ. ನಿನ್ನೆ ರಾತ್ರಿ ಮಳೆ ಬರುತ್ತಿದ್ದ ಸಮಯದಲ್ಲಿ ಇಟ್ಟಂಗಿ ಭಟ್ಟಿಗೆ ಪ್ಲಾಸ್ಟಿಕ್ ಹೊದಿಕೆ ಹಾಕುತ್ತಿದ್ದ. ಈ ಸಮಯದಲ್ಲಿ ಬಡಿದ ಸಿಡಿಲಿನಿಂದಾಗಿ ಆತ ಮೃತಪಟ್ಟಿರುವುದಾಗಿ ವರದಿಯಾಗಿದೆ.
ಬೆಳಗಾವಿ ಜಿಲ್ಲೆಯಲ್ಲಿ ಮಧ್ಯಾಹ್ನ 3ರ ವೇಳೆಗೆ ಆರಂಭಗೊಂಡ ಮಳೆ ನಾಲ್ಕೈದು ಗಂಟೆಗಳ ಕಾಲ ಆರ್ಭಟಿಸಿದೆ. ಇತ್ತ ಸಿಡಿಲಿಗೆ ಓರ್ವ ಯುವಕ ಬಲಿಯಾದರೆ ಬೆಳಗಾವಿಯಲ್ಲಿಯೇ ತೆಂಗಿನ ಮರವೊಂದಕ್ಕೆ ಸಿಡಿಲು ಬಡಿದು ಹೊತ್ತಿ ಉರಿದ ಬಗ್ಗೆ ವರದಿಯಾಗಿದೆ.