ಶಿಕ್ಷಕನ ಕಾಮಪುರಾಣ: ಮೊದಲು ಎರಡು ಮದುವೆಯಾದ, ಲಾಕ್‌ಡೌನ್‌ನಲ್ಲಿ ಇನ್ನಿಬ್ಬರಿಗೆ ತಾಳಿ ಕಟ್ಟಿದ...

marraige
Published on

ಕಟಕ್‌ (ಒಡಿಶಾ): ಒಂದೆಡೆ ಎಷ್ಟೋ ಯುವಕರು ತಮಗೆ ಮದುವೆಯಾಗಲು ಹೆಣ್ಣೇ ಸಿಗುತ್ತಿಲ್ಲ ಎಂದು ಗೋಳಾಡುತ್ತಿರುವಾಗ ಇಲ್ಲೊಬ್ಬ ಶಿಕ್ಷಕ ನಾಲ್ಕಾಲ್ಕು ಮದುವೆಯಾಗಿದ್ದಾನೆ. ಅದೂ ಯಾವಾಗ ಅಂತೀರಾ? ಕರೊನಾ ಹಾಗೂ ಪೊಲೀಸ್‌ ಕಾವಲಿನಿಂದಾಗಿ ಎಲ್ಲರೂ ಹೊರಗೆ ಹೋಗಲು ಭಯಪಡುತ್ತಿದ್ದ ಲಾಕ್‌ಡೌನ್‌ ಸಮಯದಲ್ಲಿ!

ಇಂಥದ್ದೊಂದು ಘಟನೆ ನಡೆದಿರುವುದು ಒಡಿಶಾದ ಕಟಕ್ ಜಿಲ್ಲೆಯಲ್ಲಿ. ಸರ್ಕಾರಿ ಶಾಲೆಯ 45 ವರ್ಷದ ಶಿಕ್ಷಕ ನಾಲ್ಕು ಮದುವೆಯಾಗಿ ಈಗ ಪೊಲೀಸರ ಅತಿಥಿಯಾಗಿದ್ದಾನೆ. ಮೊದಲು ಎರಡು ಮದುವೆಯಾಗಿರುವ ಈತ ಅವರಿಗೆ ವಿಚ್ಛೇದನ ನೀಡದೇ ಲಾಕ್‌ಡೌನ್‌ ಸಮಯದಲ್ಲಿ ಇನ್ನೆರಡು ಮದುವೆಯಾಗಿರುವ ಹಿನ್ನೆಲೆಯಲ್ಲಿ ಈತನ ವಿರುದ್ಧ ದೂರು ದಾಖಲಾಗಿದ್ದು, ಪೊಲೀಸರು ಬಂಧಿಸಿದ್ದಾರೆ.

ಆತ 2, 3, 4ನೇ ಮದುವೆಯಾಗಿದ್ದು ಹಿಂದಿನ ಪತ್ನಿಯರಿಗೆ ತಿಳಿದೇ ಇರಲಿಲ್ಲ. ಆದರೆ ಈತನ ಕಾಮಪುರಾಣ ಬೆಳಕಿಗೆ ಬಂದದ್ದು ಮೊದಲ ಮತ್ತು ಎರಡನೆಯ ಪತ್ನಿಯರು ಪರಸ್ಪರ ಭೇಟಿಯಾದಾಗ. ನಂತರ ಇಬ್ಬರೂ ಸೇರಿ ತನಿಖೆ ಶುರು ಮಾಡಿದಾಗ ಇನ್ನೂ ಎರಡು ಮದುವೆಯಾಗಿರುವುದು ತಿಳಿದಿದೆ. ಈ ಹಿನ್ನೆಲೆಯಲ್ಲಿ ಅವರಿಬ್ಬರೂ ಸೇರಿ ಮಹಿಳಾ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಅವರ ದೂರಿನ ಆಧಾರದ ಮೇಲೆ ಶಿಕ್ಷಕನನ್ನು ಬಂಧಿಸಲಾಗಿದೆ.

ಈತನ ಕಥೆ ಶುರುವಾಗುವುದು 2001ರಿಂದ. 2001ರಲ್ಲಿ ಮೊದಲ ಬಾರಿಗೆ ಈತ ಮದುವೆಯಾಗಿದ್ದಾನೆ. ಎಂಟು ತಿಂಗಳು ಆಕೆಯ ಜತೆ ಸಂಸಾರ ಮಾಡಿ, ವಿಚ್ಛೇದನ ನೀಡದೇ ಆಕೆಯ ಅರಿವಿಗೆ ಬಾರದೇ ಇನ್ನೊಂದು ಮದುವೆಯಾಗಿದ್ದಾನೆ. ಎರಡನೆಯ ಪತ್ನಿಯ ಜತೆ ಮೂರು ವರ್ಷ ಇದ್ದು ಆಕೆಯ ಚಿನ್ನಾಭರಣಗಳೊಂದಿಗೆ ಪರಾರಿಯಾಗಿದ್ದ ಈ ಶಿಕ್ಷಕ.

ನಂತರ ಕಳೆದ ವರ್ಷ ಲಾಕ್‌ಡೌನ್‌ ಜಾರಿಯಾದ ಸಂದರ್ಭದಲ್ಲಿ ಇಬ್ಬರು ಮಹಿಳೆಯರನ್ನು ಮದುವೆಯಾಗಿದ್ದಾನೆ. ಈ ನಾಲ್ಕೂ ಮದುವೆಯ ಬಗ್ಗೆ ಒಬ್ಬರಿಗೊಬ್ಬರ ಅರಿವಿಗೆ ಬಾರದಂತೆ ಗುಟ್ಟು ಕಾಯ್ದುಕೊಂಡಿದ್ದ. ಆದರೆ ಈ ವಿಷಯ ಮೊದಲಿಬ್ಬರು ಪತ್ನಿಯರಿಗೆ ತಿಳಿದು ಇದೀಗ ದೂರು ದಾಖಲು ಮಾಡಿದ್ದಾರೆ ಎಂದು ಪೋಲಿಸ್ ಇನ್ಸ್‌ಪೆಕ್ಟರ್‌ ಅನುಸೂಯಾ ನಾಯಕ್ ಹೇಳಿದ್ದಾರೆ. ಸದ್ಯ ಈತ ಪೊಲೀಸರ ಅತಿಥಿ.

ಕ್ಷಣಕ್ಷಣದ ಮಾಹಿತಿಗಾಗಿ ವಿಜಯವಾಣಿ ಫೇಸ್​ಬುಕ್​ ಪೇಜ್​ ಲೈಕ್ಸ್​ ಮಾಡಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net