

ಭೋಪಾಲ್: ಕರೊನಾ ಎರಡನೆಯ ಅಲೆಯ ನಡುವೆಯೇ ಡೆಲ್ಟಾ ಪ್ಲಸ್ ರೂಪಾಂತರಿ ಇದೀಗ ನಡುಕ ಹುಟ್ಟಿಸಲು ಶುರುಮಾಡಿದೆ. ಮಹಿಳೆಯೊಬ್ಬರು ಈ ಸೋಂಕಿನಿಂದ ಮೃತಪಟ್ಟಿದ್ದಾರೆ. ಮಧ್ಯಪ್ರದೇಶದ ಭೋಪಾಲ್‌ನ ಮಹಿಳೆ ಚಿಕಿತ್ಸೆ ಫಲಿಸದೇ ಮೃತಪಟ್ಟಿರುವುದಾಗಿ ವೈದ್ಯರು ಹೇಳಿದ್ದಾರೆ.
ಡೆಲ್ಟಾ ಪ್ಲಸ್ ಸೋಂಕಿನಿಂದ ಮೃತಪಟ್ಟ ಮಹಿಳೆಯ ಪತಿಗೆ ಮೊದಲು ಕರೊನಾ ಸೋಂಕು ತಗುಲಿತ್ತು. ನಂತರ ಅವರ ಪತ್ನಿಗೂ ಸೋಂಕು ತಗುಲಿತ್ತು. ಕ್ರಮೇಣ ಅವರಿಗೆ ಡೆಲ್ಟಾ ಪ್ಲಸ್ ಸೋಂಕು ತಗುಲಿತ್ತು. ಅವರೀಗ ಮೃತಪಟ್ಟಿದ್ದಾರೆ.
ಮಧ್ಯಪ್ರದೇಶದಲ್ಲಿ ಇದುವರೆಗೆ ಐದು ಡೆಲ್ಟಾ ಪ್ಲಸ್ ಪ್ರಕರಣಗಳು ವರದಿಯಾಗಿವೆ, ಇದರಲ್ಲಿ ಮೂರು ಪ್ರಕರಣಗಳು ಭೋಪಾಲ್‌ನಲ್ಲಿ ಪತ್ತೆಯಾಗಿದ್ದರೆ ಎರಡು ಪ್ರಕರಣಗಳು ಉಜ್ಜಯಿನಿಯಲ್ಲಿ ದೃಢಪಟ್ಟಿದೆ.ಸರ್ಕಾರವು ಪರಿಸ್ಥಿತಿಯ ಮೇಲೆ ನಿಗಾ ಇಟ್ಟಿದೆ, ಡೆಲ್ಟಾ ಪ್ಲಸ್ ಸೋಂಕು ತಾಗಿದ ರೋಗಿಗಳ ಸಂಪರ್ಕಕ್ಕೆ ಬಂದವರನ್ನು ತಪಾಸಣೆ ಮಾಡಲಾಗುತ್ತಿದೆ ಎಂದು ಮಧ್ಯಪ್ರದೇಶ ವೈದ್ಯಕೀಯ ಶಿಕ್ಷಣ ಸಚಿವ ವಿಶ್ವಾಸ್ ಸಾರಂಗ್ ಹೇಳಿದ್ದಾರೆ.
ಮಹಾರಾಷ್ಟ್ರ, ಮಧ್ಯಪ್ರದೇಶ, ಕೇರಳದಲ್ಲಿ ಡೆಲ್ಟಾ ಪ್ಲಸ್ ರೂಪಾಂತರಿ ಪ್ರಕರಣಗಳು ಹೆಚ್ಚು ಕಂಡುಬರುತ್ತಿತ್ತು,ಈ ರಾಜ್ಯಗಳಿಗೆ ಎಚ್ಚರಿಕೆ ನೀಡಲಾಗಿದೆ. ಮಹಾರಾಷ್ಟ್ರದಲ್ಲಿ 21, ಮಧ್ಯಪ್ರದೇಶದಲ್ಲಿ 6, ಕೇರಳದಲ್ಲಿ 3 ಪ್ರಕರಣಗಳು, ತಮಿಳುನಾಡಿನಲ್ಲಿ ಮೂರು ಪ್ರಕರಣಗಳು, ಕರ್ನಾಟಕದಲ್ಲಿ 2 ಪ್ರಕರಣಗಳು, ಪಂಜಾಬ್, ಆಂಧ್ರಪ್ರದೇಶ ಹಾಗೂ ಜಮ್ಮುವಿನಲ್ಲಿ ತಲಾ ಒಂದು ಪ್ರಕರಣ ಇದುವರೆಗೆ ಪತ್ತೆಯಾಗಿವೆ.