

ನವದೆಹಲಿ: ಫೇಸ್ಬುಕ್ ಇನ್ಸ್ಟಾಗ್ರಾಂ, ಟ್ವಿಟರ್, ಯುಟ್ಯೂಬ್ ಸೇರಿದಂತೆ ಎಲ್ಲೆಡೆ ಈಗ ಫೇಕ್ಗಳದ್ದೇ ಹಾವಳಿ. ಪ್ರೊಫೈಲ್ ಫೋಟೋದಲ್ಲಿ ಯಾರದ್ದೋ ಫೋಟೋ ಹಾಕಿಕೊಂಡು ಅದು ಅವರದ್ದೇ ಅಕೌಂಟ್ ಎಂದು ಬಿಂಬಿಸಿ ದುರ್ಬಳಕೆ ಮಾಡಿಕೊಳ್ಳುತ್ತಿರುವ ಪ್ರಕರಣಗಳು ಹೆಚ್ಚುತ್ತಿವೆ. ಇದೇ ಕಾರಣಕ್ಕೆ ಇದೀಗ ಕೇಂದ್ರ ಸರ್ಕಾರ ಬಹುದೊಡ್ಡ ನಿರ್ಧಾರ ತೆಗೆದುಕೊಂಡಿದೆ.
ಪ್ರಸಿದ್ಧ ವ್ಯಕ್ತಿಗಳು, ಪ್ರಭಾವಿ ವ್ಯಕ್ತಿಗಳು ಮಾತ್ರವಲ್ಲದೇ ಜನಸಾಮಾನ್ಯರ ಫೋಟೋ ಬಳಸಿಕೊಂಡು ಅಕೌಂಟ್ ಕ್ರಿಯೇಟ್ ಮಾಡಿ ಅವರ ಫೋಟೋ ಹಾಕಿದರೆ ಅದು ಇನ್ನುಮುಂದೆ 24 ಗಂಟೆಯಲ್ಲಿಯೇ ಬ್ಯಾನ್ ಆಗಲಿದೆ. ಇದರರ್ಥ ಈ ರೀತಿ ಫೇಕ್ ಫೋಟೋ ಹಾಕಿದವರ ಬಗ್ಗೆ ಗಮನಕ್ಕೆ ಬಂದರೆ, ಮೂಲ ವ್ಯಕ್ತಿ ದೂರು ಸಲ್ಲಿಸಿದಾಗ ಇದು ಅನ್ವಯ ಆಗಲಿದೆ.
ಹೊಸ ಐಟಿ ನಿಯಮಗಳ ಅಡಿಯಲ್ಲಿ ದೂರು ನೀಡಿದ 24 ಗಂಟೆಗಳ ಒಳಗೆ ಸಾಮಾಜಿಕ ಮಾಧ್ಯಮ ಕಂಪನಿಗಳು ನಕಲಿ ಪ್ರೊಫೈಲ್ಗಳನ್ನು ಸ್ಥಗಿತಗೊಳಿಸಬೇಕೆಂದು ಕೇಂದ್ರ ಸರ್ಕಾರ ಟ್ವಿಟರ್, ಗೂಗಲ್, ಫೇಸ್ಬುಕ್ಗಳಿಗೆ ಸೂಚನೆ ನೀಡಿದೆ. ಇದು ಹೊಸ ಐಟಿ ನಿಯಮಗಳ ಭಾಗವಾಗಿದೆ ಎಂದು ಕೇಂದ್ರ ಸರ್ಕಾರ ಹೇಳಿದೆ.
ತಮ್ಮ ಪುಟಗಳ ಅನುಯಾಯಿಗಳನ್ನು ಹೆಚ್ಚಿಸುವ ಸಲುವಾಗಿ, ಯಾವುದೋ ಸಂದೇಶ ನೀಡಲು ಇಲ್ಲವೇ ಅವರ ತೇಜೋವಧೆ ಮಾಡುವ ನಿಟ್ಟಿನಲ್ಲಿ ಯಾರದ್ದೋ ಫೋಟೋ ಹಾಕಿಕೊಂಡು ಇಲ್ಲಸಲ್ಲದ ಪೋಸ್ಟ್ ಮಾಡುವುದು ಹೆಚ್ಚಾಗಿರುವ ಹಿನ್ನೆಲೆಯಲ್ಲಿ, ನಕಲಿ ಯಾವುದು ಅಸಲಿ ಯಾವುದು ಎಂದು ತಿಳಿಯದೇ ಜನರು ಅದನ್ನೇ ನಂಬಿ ಮೋಸಹೋಗುತ್ತಿದ್ದಾರೆ. ಇದರಿಂದ ಎಷ್ಟೋ ಮಂದಿಗೆ ಸಮಸ್ಯೆಯಾಗುತ್ತಿದೆ. ಇದನ್ನು ಕೇಂದ್ರ ಸರ್ಕಾರ ಗಂಭೀರವಾಗಿ ಪರಿಗಣಿಸಿದೆ. ಆದ್ದರಿಂದ 24 ಗಂಟೆಯ ಒಳಗೆ ಅವರ ಅಕೌಂಟ್ ಬ್ಯಾನ್ ಆಗಲಿದೆ.