ಸಿಬಿಐ ಮಾಜಿ ನಿರ್ದೇಶಕನಿಗೆ ​'ಬ್ಲೂಟಿಕ್'​ ತಂದಿಟ್ಟ ಸಂಕಷ್ಟ: ಕೋರ್ಟ್​ನಿಂದ 10 ಸಾವಿರ ರೂ. ದಂಡ!

twitter
Published on

ನವದೆಹಲಿ: ಬಳಕೆದಾರರ ಖಾತ್ರೆಗೆ ಅಧಿಕೃತ ಮುದ್ರೆಯಾಗಿರುವ ಟ್ವಿಟರ್​ನ ಬ್ಲೂಟಿಕ್​ (ನೀಲಿಗೆರೆ) ವಿಷಯಕ್ಕೆ ಸಂಬಂಧಿಸಿದಂತೆ ಸಿಬಿಐ ಮಾಜಿ ನಿರ್ದೇಶಕ ಎಂ.ನಾಗೇಶ್ವರ ರಾವ್ ​ಅವರಿಗೆ ದೆಹಲಿ ಹೈಕೋರ್ಟ್​​ 10 ಸಾವಿರ ರೂಪಾಯಿ ದಂಡ ವಿಧಿಸಿದೆ.

ಕೆಲವು ಗಣ್ಯವ್ಯಕ್ತಿಗಳಿಗೆ ಮಾತ್ರ ನೀಡುವ ಈ ಬ್ಲೂಟಿಕ್​ ತೆಗೆದುಹಾಕಿದ್ದರ ವಿರುದ್ಧ ನಾಗೇಶ್ವರ ರಾವ್​ ಕೋರ್ಟ್​ ಮೆಟ್ಟಿಲೇರಿದ್ದರು. ಈ ಹಿಂದೆ ಕೂಡ ಅವರು ಇದೇ ವಿಷಯಕ್ಕೆ ಸಂಬಂಧಿಸಿದಂತೆ ಕೇಸ್​ ಹಾಕಿದ್ದರು. ಕಳೆದ ಏಪ್ರಿಲ್​ 7ರಂದು ಆದೇಶ ಹೊರಡಿಸಿದ್ದ ಕೋರ್ಟ್​, ಅರ್ಜಿಯನ್ನು ವಜಾ ಮಾಡಿತ್ತು. ಪುನಃ ಅದನ್ನು ಪ್ರಶ್ನಿಸಿ ಇದೀಗ ನಾಗೇಶ್ವರ ರಾವ್​ ಕೋರ್ಟ್​ ಮೊರೆ ಹೋಗಿದ್ದರು.

ಇದನ್ನು ನೋಡಿದ ನ್ಯಾಯಮೂರ್ತಿ ಯಶ್ವಂತ ವರ್ಮಾ ಅವರು ಕೋಪಗೊಂಡು, ಏಪ್ರಿಲ್ 7ರಂದೇ ಆದೇಶ ನೀಡಿದ್ದೇವಲ್ಲ, ಇನ್ನೇನಾದರೂ ಅಗತ್ಯವಿದ್ದರೆ ಕೂಡಲೇ ಅರ್ಜಿ ಸಲ್ಲಿಸಿ ಅದನ್ನು ಬಗೆಹರಿಸಿಕೊಳ್ಳಬೇಕಿತ್ತು, ಆಗ ನಿಮಗೆ ಏನು ಕಷ್ಟವಾಗಿತ್ತು ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಕುರಿತಂತೆ ನಾಗೇಶ್ವರ ರಾವ್​ ಅವರ ವಕೀಲರನ್ನು ಉದ್ದೇಶಿಸಿ, ನಿಮ್ಮ ಕಕ್ಷಿದಾರರಿಗೆ (ನಾಗೇಶ್ವರ ರಾವ್​) ಸಾಕಷ್ಟು ವೇಳೆ ಇದ್ದಂತೆ ಕಾಣಿಸುತ್ತಿದೆ. ಅದಕ್ಕೇ ಇಷ್ಟು ವಿಳಂಬವಾಗಿ ಬಂದಿದ್ದೂ ಅಲ್ಲದೇ ಅದೇ ಪ್ರಶ್ನೆಯನ್ನಿಟ್ಟು ಅರ್ಜಿ ಸಲ್ಲಿಸಿದ್ದಾರೆ. ಅವರಿಗೆ ಬಂದಾಗಲೆಲ್ಲಾ ನಮ್ಮಿಂದ ಉಡುಗೊರೆ ಬೇಕೇ ಎಂದು ಖಾರವಾಗಿ ಪ್ರಶ್ನಿಸಿದರು.

ಕೋರ್ಟ್​ ಸಮಯವನ್ನು ವೃಥಾ ವ್ಯರ್ಥ ಮಾಡಿದ ಕಾರಣದಿಂದ 10 ಸಾವಿರ ರೂಪಾಯಿ ದಂಡ ವಿಧಿಸಿದರು. 1986ರ ಬ್ಯಾಚ್​​​ ಐಪಿಎಸ್​ ಅಧಿಕಾರಿಯಾದ ಎಂ.ನಾಗೇಶ್ವರರಾವ್ 2020ರಲ್ಲಿ ಸೇವೆಯಿಂದ ನಿವೃತ್ತಿ ಹೊಂದಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net