More

    ಬೆಂಗಳೂರಿನ ಬೈಕರ್​ ರಾಜಸ್ಥಾನದಲ್ಲಿ ಸಾವು: ಕೇಸ್​ ಕ್ಲೋಸ್​ ಎನ್ನುವಷ್ಟರಲ್ಲೇ ಪತ್ನಿಯತ್ತ ಬೊಟ್ಟು ಮಾಡಿದ ಹೆಲ್ಮೆಟ್!

    ಜೈಸಲ್ಮೆರ್ (ರಾಜಸ್ಥಾನ): ಇದು 2018ರಲ್ಲಿ ನಡೆದ ಬೈಕ್ ರೇಸರ್, ಕೇರಳ ಮೂಲದ, ಬೆಂಗಳೂರು ನಿವಾಸಿ ಅಸ್ಬಾಕ್ ಹತ್ಯೆಯ ಪ್ರಕರಣವನ್ನು ಪೊಲೀಸರು ಭೇದಿಸಿದ್ದು, ಬೆಂಗಳೂರಿನಲ್ಲಿ ಕೊಲೆ ಪಾತಕಿ ಸಿಕ್ಕಿಬಿದ್ದಿದ್ದಾಳೆ. ಆಕೆ ಬೇರಾರೂ ಅಲ್ಲ, ಖುದ್ದು ಅಸ್ಬಾಕ್​ನ ಪತ್ನಿ!

    ಇದು ಸಹಜ ಸಾವು ಎಂದು ಇನ್ನೇನು ಕೇಸ್​ ಕ್ಲೋಸ್​ ಮಾಡಬೇಕು ಎನ್ನುವಷ್ಟರಲ್ಲಿಯೇ ರೋಚಕ ತಿರುವು ಪಡೆದು ಇದು ಕೊಲೆ ಎಂಬ ಅಂಶ ಪೊಲೀಸರ ಗಮನಕ್ಕೆ ಬಂದ ಘಟನೆ ಇದು. ಪತಿಯ ಕೊಲೆ ಮಾಡಿ, ತಲೆ ಮರೆಸಿಕೊಂಡಿದ್ದ ಸುಮೇರಾ ಪರ್ವೇಜ್ ಕೊನೆಗೂ ಪೊಲೀಸರ ಬಲೆಗೆ ಬಿದ್ದಿದ್ದಾಳೆ. ಈ ಪ್ರಕರಣದಲ್ಲಿ ಆರೋಪಿಯಾಗಿರುವ ಇನ್ನೂ ಇಬ್ಬರು ಕಳೆದ ವರ್ಷವೇ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದು, ಪತ್ನಿ ಸುಮೇರಾ ಮಾತ್ರ ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸುತ್ತಿದ್ದಳು.

    ಏನಿದು ಘಟನೆ?
    ನಾಲ್ಕು ವರ್ಷಗಳ ಹಿಂದೆ ಅಂದರೆ 2018ರಲ್ಲಿ ಈ ದಂಪತಿ ಜೈಸಲ್ಮೇರ್​ಗೆ ಪ್ರವಾಸಕ್ಕೆಂದು ಹೋಗಿದ್ದರು. ಇವರ ಜತೆ ಸಂಜಯ್ ಕುಮಾರ್, ವಿಶ್ವಾಸ್ ಎಸ್‌ಡಿ ಮತ್ತು ಅಬ್ದುಲ್ ಸಾಬಿಕ್ ಎಂಬ ಸ್ನೇಹಿತರೂ ಇದ್ದರು. ಆದರೆ ಅಲ್ಲಿಯೇ ಶಹಗರ್ ಪ್ರದೇಶದ ಮರಳು ದಿಬ್ಬದ ಬಳಿ ಅಸ್ಬಾಕ್​ ಅವರ ಸಾವಾಗಿತ್ತು.

    ಅನುಮಾನಾಸ್ಪದವಾಗಿ ಈ ಸಾವು ಸಂಭವಿಸಿದೆ ಎಂದು ಗೋಳೋ ಎನ್ನುತ್ತಾ ಬಂದಿದ್ದ ಪತ್ನಿ ಸುಮೇರಾ ಜೈಸಲ್ಮೆರ್​ನಲ್ಲಿ ದೂರು ದಾಖಲು ಮಾಡಿದ್ದಳು. ಪೊಲೀಸರು ತನಿಖೆ ಕೈಗೊಂಡಾಗ ಅವರಿಗೆ ಇದು ಕೊಲೆ ಎಂದು ಎನಿಸಲೇ ಇಲ್ಲ! ಅಪಘಾತ ಅಥವಾ ನಿರ್ಜಲೀಕರವಾಗಿ ಸಾವಾಗಿದೆ ಎಂದೇ ಅಂದುಕೊಂಡರು. ಸಹಜ ಸಾವು ಎಂದು ಹೇಳಿ, ಫೈಲ್​ ಕ್ಲೋಸ್ ಮಾಡಲು ಕೂಡ ಹೊರಟಿದ್ದರು.

    ಆದರೆ ಅಸ್ಬಾಕ್ ಅವರ ತಾಯಿ ಮತ್ತು ಅವರ ಅಣ್ಣ ಮಾತ್ರ ಇದು ಸಹಜ ಸಾವಲ್ಲ, ಇದು ಕೊಲೆ ಎಂದು ಪೊಲೀಸರಲ್ಲಿ ಹೇಳಿದ್ದರು. ಈ ಸಂಬಂಧ ದೂರು ಕೂಡ ದಾಖಲು ಮಾಡಿದ್ದರು. ಈ ದೂರಿನ ಅನ್ವಯ ಮತ್ತೆ ಪ್ರಕರಣದ ಬೆನ್ನತ್ತಿ ಹೋಗಿದ್ದರು ಪೊಲೀಸರು. ಈ ಸಂದರ್ಭದಲ್ಲಿ ಆತನ ಕತ್ತಿನ ಮೇಲೆ ಗಾಯವಾಗಿರುವುದು ಪೊಲೀಸರ ಗಮನಕ್ಕೆ ಬಂದಿದೆ.

    ನೇತಾಡುತ್ತಿದ್ದ ಹೆಲ್ಮೆಟ್​
    ಇನ್ನೂ ಪ್ರಕರಣದ ಆಳಕ್ಕೆ ಹೋದಾಗ ಪೊಲೀಸರಿಗೆ ಕಂಡದ್ದು ಅಸ್ಬಾಕ್​ ಅವರ ಬೈಕ್ ಮತ್ತು ನೇತಾಡುವ ಹೆಲ್ಮೆಟ್​. ಇದರಿಂದ ಇಡೀ ಕೇಸು ತಿರುವು ಪಡೆದುಕೊಂಡಿತ್ತು. ಬೈಕ್​ ಸ್ಟ್ಯಾಂಡ್​ ಹಾಕಿ ನಿಲ್ಲಿಸಲಾಗಿತ್ತು. ಅಲ್ಲಿ ಹೆಲ್ಮೆಟ್​ ನೇತಾಡುತ್ತಿತ್ತು. ಅಸ್ಬಾಕ್​ ಕುತ್ತಿಗೆಯ ಮೇಲೆ ಗಾಯವಾಗಿತ್ತು. ಹೆಲ್ಮೆಟ್​ ದಾರ ಎಳೆದು ಕುತ್ತಿಗೆಗೆ ಗಾಯವಾಗಿದ್ದರೂ, ಅದು ಯಾವ ರೀತಿಯ ಗಾಯವಾಗಿತ್ತು ಎಂದರೆ ಆ ಸಂದರ್ಭದಲ್ಲಿ ಬೈಕ್​ ಚಲಾಯಿಸಲು ಎಂಥವರಿಗೂ ಸಾಧ್ಯವಾಗುತ್ತಿರಲಿಲ್ಲ. ಅಂಥದ್ದರಲ್ಲಿ ಬೈಕ್​ನ ಮೇನ್​ ಸ್ಟ್ಯಾಂಡ್​ ಹಾಕಿ ನಿಲ್ಲಿಸಿದ್ದು ಹೇಗೆ ಎಂಬ ಬಗ್ಗೆ ಪೊಲೀಸರಿಗೆ ಸಂಶಯ ಬಂತು. ಹೆಲ್ಮೆಟ್​ ಕೂಡ ಬೈಕ್​ನಲ್ಲಿ ನೇತಾಡುತ್ತಿದ್ದು, ಇದು ಕೂಡ ಅಪಘಾತ ಆಗಿರುವ ಸೂಚನೆ ನೀಡುತ್ತಿರಲಿಲ್ಲ.

    ಇದರಿಂದ ಕೇಸ್​ ಮುಚ್ಚು ಹಾಕುವ ಬದಲು ಪೊಲೀಸರು ತನಿಖೆ ಕೈಗೊಂಡಾಗ ತಿಳಿದದ್ದು ಏನೆಂದರೆ ಅಸ್ಬಾಕ್​ ಭಾರಿ ಆಸ್ತಿಗಳ ಒಡೆಯನಾಗಿದ್ದರು. ಆಸ್ತಿಗಾಗಿ ಕೊಲೆ ನಡೆದಿದೆ ಎಂಬ ಶಂಕೆ ಅವರಿಗೆ ವ್ಯಕ್ತವಾಯಿತು. ಅವರ ನೇರವಾದ ಸಂಶಯ ಬಂದದ್ದು ಪತ್ನಿ ಸುಮೇರಾ ಪರ್ವೇಜ್ ಮೇಲೆ. ನಂತರ ಆಕೆಯ ಹಿನ್ನೆಲೆ ಹಾಗೂ ಘಟನೆ ನಡೆದ ಕೆಲ ದಿನಗಳ ಮಾಹಿತಿ ಕಲೆ ಹಾಕಿದಾಗ ಅವರಿಬ್ಬರ ನಡುವೆ ಜಗಳವಾಗಿದ್ದು ತಿಳಿದುಬಂತು.

    ನಂತರ ಆಕೆಯ ಮೊಬೈಲ್​ ಪರಿಶೀಲನೆ ಮಾಡಿದಾಗ ತಿಂಗಳಿಗೊಮ್ಮೆ ಸಿಮ್​ಕಾರ್ಡ್​ ಬದಲಾಯಿಸುತ್ತಿದ್ದುದು ಪೊಲೀಸರ ಗಮನಕ್ಕೆ ಬಂತು. ಘಟನೆ ನಡೆದ ದಿನದಿಂದ ತನ್ನ ಮೇಲೆ ಅನುಮಾನ ಬರಬಾರದು, ತನ್ನ ಮೊಬೈಲ್​ ಟ್ರೇಸ್​ ಆಗಬಾರದು ಎನ್ನುವ ಕಾರಣಕ್ಕೆ ಸಿಮ್​ ಬದಲಾಯಿಸುತ್ತಿದ್ದುದು ತಿಳಿಯಿತು. ಈ ನಡುವೆಯೇ ಕೊಲೆ ಆರೋಪಿಗಳಾದ ಇಬ್ಬರು ಸಿಕ್ಕಿಬಿದ್ದಿದ್ದರು. ಆದರೆ ಸುಮೇರಾ ಮಾತ್ರ ಎಸ್ಕೇಪ್​ ಆಗಿದ್ದಳು.

    ನಂತರ ವರ್ಷಗಳಾದರೂ ಈಕೆಯ ಪತ್ತೆಯಾಗಿರಲಿಲ್ಲ. ಕೊನೆಗೆ ಬೆಂಗಳೂರಿನಲ್ಲಿ ಈಕೆ ನೆಲೆಸಿರುವ ಬಗ್ಗೆ ತಿಳಿದ ಪೊಲೀಸರು ಅಲ್ಲಿಗೆ ಹೋಗಿ ಸದ್ಯ ಇವಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ತನಿಖೆ ಮುಂದುವರೆದಿದೆ.

    ಲವರ್‌ ಜತೆಗೂಡಿ ತಮ್ಮನನ್ನೇ ಕೊಲೆ ಮಾಡಿ ಶವದ ಮುಂದೆ ಗೋಳೋ ಎಂದು ಅತ್ತ ಹುಬ್ಬಳ್ಳಿ ಹೆಣ್ಣು!

    ಮೈಸೂರಿನ ನಾಟಿ ವೈದ್ಯನ ಬರ್ಬರ ಕೊಲೆ ರಹಸ್ಯ ಬಯಲು! ದರೋಡೆ ಕೇಸ್ ದಾಖಲಿಸಲು ಬಂದು ಸಿಕ್ಕಿಬಿದ್ದ ಕೊಲೆಗಾರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts