

ಲಂಡನ್: ಈಗ ಎಲ್ಲೆಲ್ಲೂ ಕರೊನಾ ವೈರಸ್ ಹಾವಳಿ. ಈ ಹಿನ್ನೆಲೆಯಲ್ಲಿ ಹೊರಗಡೆ ಕಾಲಿಡಲು ಎಷ್ಟೋ ಮಂದಿ ಹೆದರುತ್ತಾರೆ. ಆದರೆ ಬ್ರಿಟನ್‌ನ ಇಬ್ಬರು ಮಹಿಳೆಯರು ಮಾತ್ರ ಕರೊನಾಕ್ಕೂ ಜಗ್ಗದೇ, ಯಾತ್ರೆಗೂ ಬಗ್ಗದೇ ಕರೊಆ ವೈರಸ್ ಹಾವಳಿ ಮತ್ತು ಪ್ರಕೃತಿ ವಿಕೋಪಗಳನ್ನು ನಿಭಾಯಿಸಿ ಒಂದೇ ಸೈಕಲ್‍ನಲ್ಲಿ ಪ್ರಪಂಚ ಪರ್ಯಟನೆ ಮಾಡಿ ಗಿನ್ನೆಸ್‌ನಲ್ಲಿ ಹೆಸರು ಮೂಡಿಸಿಕೊಂಡಿದ್ದಾರೆ. ವಿಶ್ವ ದಾಖಲೆ ನಿರ್ಮಿಸಿದ್ದಾರೆ.
ಕರೊನಾ ವೈರಸ್ ಹಾವಳಿ ನಡುವೆ ಭಾರೀ ಮಳೆ, ಪ್ರವಾಹ, ಕಾಡ್ಗಿಚ್ಚು ಇತ್ಯಾದಿ ಪ್ರಕೃತಿ ವಿಕೋಪಗಳನ್ನು ನಿಭಾಯಿಸಿ ತಮ್ಮ ಗುರಿ ಮುಟ್ಟಿದ್ದಾರೆ.
ಕ್ಯಾಟ್ ಡಿಕ್ಸನ್ (55) ಮತ್ತು ರಾಝ್ ಮಾರ್ಸ್‍ಡೆನ್ (54) ಎಂಬ ಸಾಹಸಿ ಮಹಿಳೆಯರು ಸೈಕಲ್‌ನಲ್ಲಿ ಅತ್ಯಂತ ವೇಗವಾಗಿ ವಿಶ್ವ ಪ್ರದಕ್ಷಿಣೆ ಹಾಕಿದ ವನಿತೆಯರೆಂಬ ಹೆಗ್ಗಳಿಕೆ ಪಡೆದುಕೊಂಡಿದ್ದಾರೆ.
2019ರ ಜೂನ್‍ನಲ್ಲಿ ಇಂಗ್ಲೆಂಡ್‍ನಿಂದ ಪ್ರಪಂಚ ಪರ್ಯಟನೆ ಆರಂಭಿಸಿದರು. ಆಗೇನು ಕರೊನಾ ಹಾವಳಿ ಏನೂ ಇರಲಿಲ್ಲ. ಆದರೆ ಇವರು ಪ್ರಯಾಣ ಮಾಡಿದ್ದು 263 ದಿನಗಳು, 8 ಗಂಟೆಗಳು ಮತ್ತು ಏಳು ನಿಮಿಷ. ಈ ನಡುವೆಯೇ ಕರೊನಾ ವೈರಸ್ ಇಡೀ ವಿಶ್ವವನ್ನು ನಡುಗಿಸಿತ್ತು. ಆದರೆ ಅದಕ್ಕೆ ಹೆದರದೇ ಈ ಮಹಿಳೆಯರು ಸೈಕಲ್ ಮೇಲೆ ಜಗತ್ತನ್ನು ಸುತ್ತಿ ಹೊಸ ಗಿನ್ನೆಸ್ ವಿಶ್ವ ದಾಖಲೆ ನಿರ್ಮಿಸಿದ್ದಾರೆ. ಇವರ ಈ ಸಾಧನೆಯು 2021ರ ಗಿನ್ನಿಸ್ ವಿಶ್ವ ದಾಖಲೆ ಪುಸ್ತಕದಲ್ಲಿ ಸೇರ್ಪಡೆಯಾಗಿದೆ.
ಇವರು ಮಹಿಳೆಯರ ವಿಭಾಗದಲ್ಲಿ ಮಾತ್ರ ದಾಖಲೆಯನ್ನು ನಿರ್ಮಿಸದೆ ಪುರುಷರ ದಾಖಲೆಯನ್ನೂ ಮೀರಿರುವುದಾಗಿ ಹೇಳಲಾಗಿದೆ.
ಬ್ರಿಟನ್‍ನವರೇ ಆದ ಲಾಯ್ಡ್ ಎಡ್ವರ್ಡ್ ಕೋಲಿಯರ್ ಮತ್ತು ಲೂಯಿಸ್ ಪಾಲ್ ಸ್ನೇಲ್‍ಗ್ರೋವ್ ಅವರು ಪುರುಷರ ವಿಭಾಗದಲ್ಲಿ ಮಾಡಿದ್ದ ದಾಖಲೆಯನ್ನು ಕ್ಯಾಟ್ ಡಿಕ್ಸನ್ ಮತ್ತು ರಾಝ್ ಮಾರ್ಸ್‍ಡೆನ್ ಅಳಿಸಿ ಹಾಕಿದರು. ಲಾಯ್ಡ್ ಮತ್ತು ಲೂಯಿಸ್ 281 ದಿನಗಳಲ್ಲಿ ವಿಶ್ವ ಪರ್ಯಟನೆ ಮಾಡಿದ್ದರು.
ಅಲೈಸ್ ಹೆಸರಿನ ಟಾಂಡೆಮ್ ಬೈಕ್ ಮೇಲೆ ಪ್ರತಿದಿನ 130 ರಿಂದ 160 ಕಿಲೋ ಮೀಟರ್‌ಗಳಷ್ಟು ದೂರ ಸವಾರಿ ಮಾಡುತ್ತಿದ್ದೆವು. 25 ದೇಶಗಳಲ್ಲಿ ಪ್ರವಾಸ ಕೈಗೊಂಡಿದ್ದೇವೆ ಎಂದು ಇವರು ಹೇಳಿದ್ದಾರೆ.