

ರಾಯ್ಪುರ (ಛತ್ತೀಸಗಢ): ಈಗ ಕರೊನಾ ಲಸಿಕೆಯ ವೇಳೆ. ಮಹಾಮಾರಿ ಕರೊನಾದಿಂದ ಬಚಾವಾಗಲು ಲಸಿಕೆಯನ್ನು ತೆಗೆದುಕೊಳ್ಳಿ ಎಂದು ಎಲ್ಲಾ ಸರ್ಕಾರಗಳೂ ಘೋಷಣೆ ಮಾಡುತ್ತಿವೆ. ಆದರೂ ಯಾಕೋ ಹಲವರಿಗೆ ಈ ಲಸಿಕೆಯ ಮೇಲೆ ಸಂದೇಹ.
ಈ ಸಂದೇಹ ಹೋಗಲಾಡಿಸಲು ಖುದ್ದು ಪ್ರಧಾನಿ ನರೇಂದ್ರ ಮೋದಿಯವರೇ ಲಸಿಕೆ ಹಾಕಿಕೊಂಡಿದ್ದಾಗಿದೆ. ಇದರ ಜತೆಗೆ ಗಣ್ಯಾತಿಗಣ್ಯರು ಕೂಡ ಲಸಿಕೆ ಹಾಕಿಸಿಕೊಂಡು ಎಲ್ಲರೂ ಹಾಕಿಸಿಕೊಳ್ಳಿ ಎಂದು ಹೇಳುತ್ತಿದ್ದಾರೆ. ಇದರ ಹೊರತಾಗಿಯೂ ಹಲವರಿಗೆ ಇದರ ಮೇಲೆ ನಂಬಿಕೆ ಇಲ್ಲ.
ಇದೇ ಕಾರಣಕ್ಕೆ ಲಸಿಕೆಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಛತ್ತೀಸಗಢದ ಸರ್ಕಾರ ಹೊಸದೊಂದು ಪ್ಲ್ಯಾನ್ ಮಾಡಿದೆ. ಅದೇನೆಂದರೆ ಲಸಿಕೆ ಹಾಕಿಸಿಕೊಳ್ಳಲು ಬರುವವರಿಗೆ ಉಚಿತವಾಗಿ ಟೊಮ್ಯಾಟೋ ನೀಡಲಾಗುತ್ತಿದೆ!
ಮೇ 1ರಿಂದ 18 ವರ್ಷಕ್ಕಿಂತ ಮೇಲ್ಪಟ್ಟ ಎಲ್ಲರಿಗೂ ಲಸಿಕೆ ನೀಡುವಂತೆ ಕೇಂದ್ರ ಸರ್ಕಾರ ಘೋಷಿಸಿದೆ. ಈ ಹಿನ್ನೆಲೆಯಲ್ಲಿ ಯಾವುದೇ ಅಂಜಿಕೆ ಇಲ್ಲದೇ ಲಸಿಕೆ ಹಾಕಿಸಿಕೊಳ್ಳಿ ಎಂದು ಸಾರಲು ಇದಾಗಲೇ ಟೊಮ್ಯಾಟೊ ನೀಡಲಾಗುತ್ತಿದ್ದು, ಮುಂದೆ ಬರುವವರಿಗೂ ಅದನ್ನು ನೀಡುವುದಾಗಿ ಸರ್ಕಾರ ಹೇಳಿದೆ. ಇದರ ಫೋಟೋ ವೈರಲ್ ಆಗಿದ್ದು, ಮಹಿಳೆಯರು ಖುಷಿಯಿಂದ ಟೊಮ್ಯಾಟೋ ಹಿಡಿದು ಬರುವುದನ್ನು ನೋಡಬಹುದಾಗಿದೆ.