

ಖಾರ್ಡಾ (ಪಶ್ಚಿಮ ಬಂಗಾಳ): ಶವ ಸಂಸ್ಕಾರ ಮುಗಿಸಿ ಕುಟುಂಬಸ್ಥರು ದುಃಖದಲ್ಲಿ ಮುಳುಗಿರುವ ಸಂದರ್ಭದಲ್ಲಿ ಸತ್ತುಹೋದ ವ್ಯಕ್ತಿ ಎದುರು ಬಂದರೆ ಹೇಗಿರುತ್ತೆ?
ಅಬ್ಬಾ! ಊಹಿಸಿಕೊಳ್ಳೋದೂ ಕಷ್ಟ ಎನಿಸತ್ತೆ ಅಲ್ಲವೆ? ಆದರೆ ಅಂಥದ್ದೇ ಒಂದು ಘಟನೆ ಪಶ್ಚಿಮ ಬಂಗಾಳದ ಉತ್ತರ 24 ಪರಗಣ ಜಿಲ್ಲೆಯಲ್ಲಿ ನಡೆದಿದೆ. ಖಾರ್ಡಾದ ಬಾಲ್ರಂಪುರ್ ನಿವಾಸಿಯಾಗಿರುವ 75 ವರ್ಷದ ವೃದ್ಧೆ ಶಿಬ್ದಾಸ್ ಬ್ಯಾನರ್ಜಿ ಅವರು ಶವಸಂಸ್ಕಾರದ ನಂತರ ಮನೆಗೆ ಮರಳಿ ಗಾಬರಿ ಹುಟ್ಟಿಸಿದವರು.
ಅಷ್ಟಕ್ಕೂ ಆಗಿದ್ದೇನೆಂದರೆ, ಶಿಬ್ದಾಸ್ ಬ್ಯಾನರ್ಜಿಯವರಿಗೆ ಕರೊನಾ ಸೋಂಕು ದೃಢಪಟ್ಟಿದ್ದ ಹಿನ್ನೆಲೆಯಲ್ಲಿ ಅವರನ್ನು ನವೆಂಬರ್ 4 ರಂದು ಬಾಲ್ರಂಪುರ್ ಬಸು ಆಸ್ಪತ್ರೆಗೆ ದಾಖಲಿಸಲಾಯಿತು. ಚಿಕಿತ್ಸೆ ಫಲಕಾರಿಯಾಗದೇ ಅವರು ಮೃತಪಟ್ಟಿರುವುದಾಗಿ ನವೆಂಬರ್ 13ರಂದು ವೈದ್ಯರು ತಿಳಿಸಿದರು.
ಕರೊನಾ ಸೋಂಕಿನ ಹಿನ್ನೆಲೆಯಲ್ಲಿ, ನಿಯಮದಂತೆ ಸಂಪೂರ್ಣ ಶರೀರವನ್ನು ಪ್ಯಾಕ್ ಮಾಡಿ ಕುಟುಂಬಸ್ಥರಿಗೆ ನೀಡಲಾಯಿತು. ನಂತರ ಕುಟುಂಬದವರು ಅಂತ್ಯಸಂಸ್ಕಾರವನ್ನೂ ನೆರವೇರಿಸಿದರು.
ಮಾರನೆಯ ದಿನ ಆಸ್ಪತ್ರೆಯಿಂದ ಕರೆ ಬಂದು ತುರ್ತಾಗಿ ಬರುವಂತೆ ಹೇಳಲಾಯಿತು. ನಂತರ ಕುಟುಂಬಸ್ಥರು ಬಂದು ನೋಡಿದಾಗ ಶಿಬ್ದಾಸ್ ಬ್ಯಾನರ್ಜಿ ಅಲ್ಲಿಯೇ ಇದ್ದರು. ಅರೆ ಕ್ಷಣ ಕುಟುಂಬಸ್ಥರು ಹೌಹಾರಿ ಹೋದರು. ನಿನ್ನೆಯಷ್ಟೇ ಶವ ಸಂಸ್ಕಾರ ಮುಗಿಸಿಬಂದಿದ್ದ ಅಜ್ಜಿ ಇಲ್ಲಿ ಪ್ರತ್ಯಕ್ಷ ಆಗಿರುವುದು ಕಂಡು ಹೆದರಿದರು.
ನಂತರ ಸುಧಾರಿಸಿಕೊಂಡು ಆಸ್ಪತ್ರೆಯ ವೈದ್ಯಾಧಿಕಾರಿಗಳನ್ನು ಪ್ರಶ್ನಿಸಿದಾಗ, ಅವರು ಹೇಳಿದ್ದು ಇಷ್ಟೇ. ಶಿಬ್ದಾಸ್ ಆ ಆಸ್ಪತ್ರೆಗೆ ದಾಖಲಾಗಿದ್ದ ದಿನವೇ ಅಷ್ಟೇ ವಯಸ್ಸಿನ ಮೋಹಿನಿಮೋಹನ್ ಮುಖರ್ಜಿ ಎಂಬ ವೃದ್ಧೆಯನ್ನೂ ದಾಖಲು ಮಾಡಲಾಗಿತ್ತು. ಮೋಹಿನಿಮೋಹನ್ ಅವರು ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದರು.
ಆದರೆ ಕರೊನಾ ಸೋಂಕು ಶುರುವಾದಾನಿಂದಲೂ ಆಸ್ಪತ್ರೆಗಳಲ್ಲಿ ಸಾಮಾನ್ಯವಾಗಿರುವ ಎಡವಟ್ಟು ಈ ಆಸ್ಪತ್ರೆಯಲ್ಲಿಯೂ ಮುಂದುವರೆದಿದ್ದು, ಶಿಬ್ದಾಸ್ ಕುಟುಂಬಸ್ಥರಿಗೆ ಕರೆ ಮಾಡಿ ಅವರಿಗೆ ಶವವನ್ನು ಹಸ್ತಾಂತರ ಮಾಡಲಾಗಿದೆ. ಶವವೂ ಸಂಪೂರ್ಣ ಸೀಲ್ ಆಗಿರುವ ಕಾರಣ, ಕುಟುಂಬದವರೂ ಶವವನ್ನು ನೋಡಲಿಲ್ಲ. ಹಾಗೆಯೇ ಸಂಸ್ಕಾರವನ್ನೂ ಮಾಡಿ ಮುಗಿಸಿದ್ದಾರೆ.
ಈ ಬಗ್ಗೆ ತನಿಖೆಗೆ ನಾಲ್ಕು ಸದಸ್ಯರ ವಿಚಾರಣಾ ಸಮಿತಿಯನ್ನು ರಚಿಸಲಾಗಿದೆ. ಜಿಲ್ಲಾ ಆರೋಗ್ಯ ಇಲಾಖೆ ತನಿಖೆ ಆರಂಭಿಸಿದೆ. ಸದ್ಯ ಸೋಂಕಿನಿಂದ ಗುಣಮುಖರಾಗಿರುವ ಅಜ್ಜಿಯನ್ನು ಕುಟುಂಬಸ್ಥರು ಮನೆಗೆ ಕರೆದುಕೊಂಡು ಹೋಗಿದ್ದಾರೆ.