

ನವದೆಹಲಿ: ಕರೊನಾ ಎರಡನೆಯ ಅಲೆಗೆ ಭಾರತ ಕಂಗೆಟ್ಟು ಹೋಗಿದೆ. ಕ್ಷಣ ಕ್ಷಣವೂ ಈ ಮಹಾಮಾರಿ ಪಡೆಯುತ್ತಿರುವ ಬಲಿಯ ಸಂಖ್ಯೆ ಏರುತ್ತಲೇ ಸಾಗಿದೆ. ಕಳೆದ 24 ಗಂಟೆಗಳಲ್ಲಿ ಸೋಂಕಿತರ ಸಂಖ್ಯೆ 3 ಲಕ್ಷ ಗಡಿ ದಾಟಿದೆ. ಈ ಕುರಿತು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದಿಂದ ಹೊರಟಿರುವ ಮಾಹಿತಿಯಲ್ಲಿ ಉಲ್ಲೇಖವಾಗಿದೆ.
ಕಳೆದ ಮಂಗಳವಾರದ (ಏ.20) ಬೆಳಗ್ಗೆ 8 ಗಂಟೆಯಿಂದ ಬುಧವಾರ (ಏ.21) ಬೆಳಗ್ಗೆ 8 ಗಂಟೆಯವರೆಗಿನ ದಾಖಲೆಗಳನ್ನು ಸಚಿವಾಲಯ ಬಿಡುಗಡೆ ಮಾಡಿದ್ದು, ಈ ಅವಧಿಯಲ್ಲಿ 3,14,835 ಹೊಸ ಪ್ರಕರಣಗಳು ಪತ್ತೆಯಾಗಿವೆ. ಇದರೊಂದಿಗೆ ಒಟ್ಟು ಸೋಂಕಿತರ ಸಂಖ್ಯೆ 1,59,30,965ಕ್ಕೆ ಏರಿಕೆಯಾಗಿದೆ.
ಕಳೆದ 24 ಗಂಟೆಗಳಲ್ಲಿ 2,104 ಮಂದಿ ಮೃತಪಟ್ಟಿದ್ದು, ಸಾವಿನ ಸಂಖ್ಯೆ 1,84,657ಕ್ಕೆ ಏರಿಕೆಯಾಗಿದೆ. ಸಕ್ರಿಯ ಪ್ರಕರಣಗಳ ಸಂಖ್ಯೆ 22,91,428 ಇದ್ದು, ಕಳೆದ 24 ಗಂಟೆಗಳಲ್ಲಿ 1,78,841 ಮಂದಿ ಗುಣಮುಖರಾಗಿದ್ದಾರೆ. ಈವರೆಗೂ ಚೇತರಿಸಿಕೊಂಡವರ 1,34,54,880ಕ್ಕೆ ತಲುಪಿದೆ.
ಭಾರತದಲ್ಲಿ ಒಂದೇ ದಿನ 16,51,711 ಮಂದಿಯನ್ನು ಕರೊನಾ ಪರೀಕ್ಷೆಗೊಳಪಡಿಸಲಾಗಿದ್ದು, ಈವರೆಗೂ 27,27,05,103 ಮಂದಿಯನ್ನು ಪರೀಕ್ಷೆಗೊಳಪಡಿಸಲಾಗಿದೆ.