

ಇಂಡೋನೇಷ್ಯಾ : 2004ರಲ್ಲಿ ಭಾರತ ಸೇರಿದಂತೆ ಶ್ರೀಲಂಕಾ, ಥೈಲೆಂಡ್ ಹಾಗೂ ಇಂಡೋನೇಷ್ಯಾದ ಲಕ್ಷಾಂತರ ಮಂದಿಯನ್ನು ಅಲ್ಲೋಲ ಕಲ್ಲೋಲ ಮಾಡಿತ್ತು ಸುನಾಮಿ. ಇಂಡೋನೇಷ್ಯಾದಲ್ಲಿ ಉಂಟಾದ ಸುನಾಮಿಯ ಅಬ್ಬರದಕ್ಕೆ ಎರಡೂವರೆ ಲಕ್ಷ ಮಂದಿ ಪ್ರಾಣ ಕಳೆದುಕೊಂಡಿದ್ದರು.
ಇದೇ ಸಂದರ್ಭದಲ್ಲಿ ಆ ಎರಡೂವರೆ ಲಕ್ಷದ ಮಂದಿಯಲ್ಲಿ ಒಬ್ಬರು ಎಂದೇ ನಂಬಲಾಗಿದ್ದವರು ಪೊಲೀಸ್ ಅಧಿಕಾರಿ ಅಬ್ರಿಪ್ ಆಸೆಪ್.
ಈ ಘಟನೆ ನಡೆದು 17 ವರ್ಷಗಳೇ ಗತಿಸಿಹೋಗಿವೆ. ಇವರ ಮನೆಯವರು ಕೂಡ ಆ ಭೀಕರ ಘಟನೆಯನ್ನು ಮರೆತೇ ಬಿಟ್ಟಿರುವ ಮಧ್ಯೆಯೇ, ಅಬ್ರಿಪ್ ಅವರು ಬದುಕಿಳಿರುವ ಸುದ್ದಿಯೀಗ ಮನೆಯವರಿಗೆ ತಲುಪಿದೆ!
ಸುಮಾರು 100 ಅಡಿ ಎತ್ತರದ ಸುನಾಮಿಯ ಅಲೆಗಳಿಗೆ ಪ್ರಾಣ ಕಳೆದುಕೊಂಡಿದ್ದ ಲಕ್ಷಾಂತರ ಮಂದಿಯಲ್ಲಿ ಇವರೂ ಒಬ್ಬರು ಎನ್ನಲಾಗಿತ್ತು. ಏಕೆಂದರೆ ಸುನಾಮಿ ನಡೆದ ಮುಖ್ಯ ಜಾಗದಲ್ಲಿಯೇ ಅಬ್ರಿಪ್ ಕೂಡ ಇದ್ದರು. ಒಂದೇ ಸಲಕ ಭಯಾನಕ ರೂಪದಲ್ಲಿ ರೌದ್ರಾವತಾರ ತೋರಿದ ಸುನಾಮಿ ಅರೆಕ್ಷಣದಲ್ಲಿ ಲಕ್ಷಾಂತರ ಮಂದಿಯ ಪ್ರಾಣವನ್ನು ಕಳೆದುಕೊಂಡಿತ್ತು. ಆ ಸಮಯದಲ್ಲಿ ಅಬ್ರಿಪ್ ಕಳೆದುಹೋಗಿದ್ದರು.
ಆದರೆ ಇದೀಗ ಅವರ ಪತ್ತೆಯಾಗಿದೆ. ಇವರು ಬದುಕಿದ್ದಾರೆ ಎನ್ನುವ ಸುದ್ದಿಯನ್ನು ಕೇಳಿ ಕುಟುಂಬಸ್ಥರು ಎಷ್ಟು ಖುಷಿ ಪಟ್ಟರೋ ಅಷ್ಟೇ ದುಃಖವೂ ಅವರಿಗೆ ಈಗ ಆಗಿದೆ. ಇದಕ್ಕೆ ಕಾರಣ, ಅಬ್ರಿಪ್ ಅವರು ತಮ್ಮ ಕುಟುಂಬವನ್ನು ಸಂಪೂರ್ಣವಾಗಿ ಮರೆತಿದ್ದಾರೆ.
‘ಅಷ್ಟಕ್ಕೂ ಆಗಿದ್ದೇನೆಂದರೆ, ಸಾಮಾಜಿಕ ಜಾಲತಾಣದಲ್ಲಿ ಅಬ್ರಿಪ್ ಅವರ ಫೋಟೋ ಹರಿದಾಡುತ್ತಿತ್ತು. ಮಾನಸಿಕ ಅಸ್ವಸ್ಥರಂತೆ ಕಂಡುಬಂದಿದ್ದ ಅಬ್ರಿಪ್ ಅವರನ್ನು ನೋಡಿದ್ದ ಕುಟುಂಬಸ್ಥರು ಅವರ ಜಾಡು ಹಿಡಿದು ಹೊರಟಿದ್ದರು. ನಂತರ ಪೊಲೀಸರ ನೆರವಿನಿಂದ ಪತ್ತೆ ಹಚ್ಚಿದ್ದಾಗ ಅಬ್ರಿಪ್ ಸಿಕ್ಕಿದ್ದರು.
ಆದರೆ ಅವರು ಕುಟುಂಬಸ್ಥರನ್ನು ಗುರುತಿಸುವ ಸ್ಥಿತಿಯಲ್ಲಿ ಇರಲಿಲ್ಲ. ದೈಹಿಕವಾಗಿ ಚೆನ್ನಾಗಿದ್ದರೂ ಕೂಡ ಮಾನಸಿಕವಾಗಿ ಅವರು ಅಸ್ವಸ್ಥರಾಗಿದ್ದಾರೆ. ಸುನಾಮಿ ದುರಂತ ಕಣ್ಣಾರೆ ಕಂಡಿದ್ದರಿಂದ ಅದರ ಶಾಕ್ನಿಂದ 17 ವರ್ಷ ಗತಿಸಿದರೂ ಬರಲಾಗದೇ ಮಾನಸಿಕ ಅಸ್ವಸ್ಥತೆ ಆಗಿರುವುದಾಗಿ ವೈದ್ಯರು ಹೇಳಿದ್ದಾರೆ. ಸುನಾಮಿಯ ಸೆಳೆತಕ್ಕೆ ಸಿಕ್ಕಿದ್ದರೂ ಬದುಕುಳಿದಿದ್ದ ಅವರನ್ನು ಯಾರೋ ಆಸ್ಪತ್ರೆಗೆ ಸೇರಿಸಿದ್ದರು.
ನಂತರ 17 ವರ್ಷಗಳಿಂದಲೂ ಮಾನಸಿಕ ರೋಗಿಗಳ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಎಂದು ಪೊಲೀಸರು ಹೇಳಿದ್ದಾರೆ.