ಪತಿಯನ್ನು ಕೊಲ್ಲಲು ಸುಪಾರಿ ಕೊಟ್ಟ ಪತ್ನಿ- ₹6 ಲಕ್ಷ ಕೊಟ್ಟ ಪುತ್ರ- ಬೆಂಗಳೂರಲ್ಲಿ ಭಯಾನಕ ಘಟನೆ!

accident
Published on

ಬೆಂಗಳೂರು: ಗಂಡನನ್ನು ಕೊಲ್ಲಲು ಹೆಂಡತಿಯೇ ಸುಪಾರಿ ಕೊಟ್ಟು, ತಂದೆಯನ್ನು ಸಾಯಿಸಲು ಮಗನೇ ಆರು ಲಕ್ಷ ರೂಪಾಯಿ ನೀಡಿರುವ ಭಯಾನಕ ಘಟನೆ ಬೆಂಗಳೂರಿನಲ್ಲಿ ನಡೆದಿದ್ದು, ಈ ಕೊಲೆ ಪ್ರಕರಣವನ್ನು ಪೊಲೀಸರು ಭೇದಿಸಿದ್ದಾರೆ.

ಬೆಂಗಳೂರಿನ ವೈಟ್ ಫೀಲ್ಡ್ ಸಂಚಾರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಸುಬ್ಬರಾಯಪ್ಪ ಎಂಬುವವರು ಕೊಲೆಯಾದವರು. ಯಶೋದಮ್ಮ ಹಾಗೂ ಅವರ ಮಗ ದೇವರಾಜ್ ಎನ್ನುವವರು ಈ ಕೃತ್ಯ ಎಸಗಿದ್ದು, ಇವರು ಅನಿಲ್ ಎಂಬಾತನಿಗೆ ದುಡ್ಡು ನೀಡಿ ಕೊಲೆಗೆ ಸುಪಾರಿ ನೀಡಿರುವುದಾಗಿ ಪೊಲೀಸರು ಹೇಳಿದ್ದಾರೆ.

ವೈಟ್ ಫೀಲ್ಡ್ ಸಂಚಾರಿ ಪೊಲೀಸರ ವ್ಯಾಪ್ತಿಯಲ್ಲಿ ಶವ ಸಿಕ್ಕಿತ್ತು. ಆದರೆ ತನ್ನ ಪತಿ ಅಪಘಾತದಲ್ಲಿ ಮೃತಪಟ್ಟಿರುವುದಾಗಿ ಯಶೋದಮ್ಮ ಹೇಳಿದ್ದಳು. ಇದಕ್ಕೆ ಮಗ ಕೂಡ ಸಾಥ್​ ನೀಡಿದ್ದ. ಅಪ್ಪ ಅಪಘಾತದಲ್ಲಿ ಮೃತಪಟ್ಟಿರುವುದಾಗಿ ಹೇಳಿದ್ದ.

ಆದರೆ ಪೊಲೀಸರು ಇದು ಅಪಘಾತವೋ, ಕೊಲೆಯೋ ಎಂಬ ಬಗ್ಗೆ ತನಿಖೆ ಆರಂಭಿಸಿದ್ದರು. ನಂತರ ಪ್ರಕರಣ ಸಂಬಂಧ ತನಿಖೆಗೆ ಒಂದು ತಂಡ ರಚಿಸಲಾಗಿತ್ತು. ತನಿಖೆಯ ವೇಳೆ ಸ್ಥಳದಲ್ಲಿ ಅಪಘಾತದ ಬಗ್ಗೆ ಯಾವುದೇ ಕುರುಹು ಸಿಕ್ಕಿರಲಿಲ್ಲ. ಇದರಿಂದ ಈ ಸಾವಿನ ಬಗ್ಗೆ ಇನ್ನಷ್ಟು ಸಂದೇಹ ಬಂತು.

ನಂತರ ಪೊಲೀಸರು ಕೊಲೆಯಾದ ವ್ಯಕ್ತಿಯ ಮೊಬೈಲ್ ಲಾಸ್ಟ್ ಕಾಲ್ ಹಾಗೂ ಸಿಸಿಟಿವಿ ದೃಶ್ಯ ಪರಿಶೀಲನೆ ಮಾಡಿದ್ದರು. ಕೊಲೆಯಾದ ಸುಬ್ಬರಾಯಪ್ಪನಿಗೆ ಕೊನೆಬಾರಿಗೆ ಅನಿಲ್ ಕರೆ ಮಾಡಿದ್ದು ತಿಳಿದುಬಂತು. ಮಾತ್ರವಲ್ಲದೇ ಸಿಸಿಟಿವಿಯಲ್ಲಿ ಅದೇ ರಸ್ತೆಯಲ್ಲಿ ಕಂಡುಬಂದಿದ್ದ ಸ್ಕಾರ್ಫಿಯೋ ಕಾರ್ ಮಾಲೀಕ ಕೂಡಾ ಅನಿಲ್ ಆಗಿರುವುದು ತಿಳಿಯಿತು.

ಆದ್ದರಿಂದ ಪೊಲೀಸರು ತನಿಖೆಯನ್ನು ಚುರುಕುಗೊಳಿಸಿ ಅನಿಲ್​ನನ್ನು ಹಿಡಿದಾಗ ಆತ ಬಾಯಿ ಬಿಟ್ಟಿದ್ದಾನೆ. 6 ಲಕ್ಷ ರೂಪಾಯಿಗೆ ಡೀಲ್ ಮಾಡ್ಕೊಂಡಿದ್ದು, ಮುಂಗಡವಾಗಿ 4 ಲಕ್ಷ ರೂಪಾಯಿ ಪಡೆದಿರುವುದನ್ನು ಹೇಳಿದ್ದಾನೆ. ಅನಿಲ್ ಜೊತೆ ಸುನೀಲ್ ಕುಮಾರ್, ನಾಗೇಶ್, ಧನುಷ್ ಸೇರಿ ಕೊಲೆ ಮಾಡಿ ಆಕ್ಸಿಡೆಂಟ್ ಎಂದು ಬಿಂಬಿಸಿರುವ ವಿಷಯ ತಿಳಿದಿದೆ. ತನಿಖೆ ಮುಂದುವರೆದಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net