

ನವದೆಹಲಿ: ಕಳೆದ ವಾರ ಯುವತಿಯೊಬ್ಬಳು ಸಾಮಾಜಿಕ ಜಾಲತಾಣದಲ್ಲಿ ಹಾಕಿದ ವಿಡಿಯೋ ಭಾರಿ ಸದ್ದು ಮಾಡಿತ್ತು. 35 ವರ್ಷದ ವ್ಯಕ್ತಿಯೊಬ್ಬ ತನ್ನ ಪ್ಯಾಂಟ್ ಬಿಚ್ಚಿ ಅಸಭ್ಯವಾಗಿ ವರ್ತಿಸಿರುವ ಬಗ್ಗೆ ಆಕೆ ಅದರಲ್ಲಿ ಬರೆದುಕೊಂಡಿದ್ದಳು.
ತಾನು ಸೈಕಲ್ನಲ್ಲಿ ಹೋಗುವ ಸಮಯದಲ್ಲಿ ಬೂದುಬಣ್ಣದ ಕಾರಿನಲ್ಲಿ ಯುವಕನೊಬ್ಬ ತನ್ನನ್ನು ಹಿಂಬಾಲಿಸಿ ಬಂದ, ನಂತರ ನನ್ನ ಬಳಿ ಬಂದ. ವಿಳಾಸ ಕೇಳಲು ಬಂದ ಎಂದುಕೊಂಡೆ. ಆದರೆ ಹತ್ತಿರ ಬಂದವನೇ ತನ್ನ ಪ್ಯಾಂಟ್ ಬಿಚ್ಚಿ, ಖಾಸಗಿ ಅಂಗವನ್ನು ಮುಟ್ಟಲು ಶುರುಮಾಡಿ ಅಸಭ್ಯವಾಗಿ ವರ್ತಿಸಿದ ಎಂದು ಬರೆದುಕೊಂಡಿದ್ದಳು.
ಕಾರಿನಲ್ಲಿ ಯಾವುದೇ ನಂಬರ್ ಪ್ಲೇಟ್ ಇರಲಿಲ್ಲ ಎಂದಿದದ್ದ ಯುವತಿ, ಈ ಬಗ್ಗೆ ಪೊಲೀಸರಲ್ಲಿ ದೂರು ಕೂಡ ದಾಖಲಾಯಿತು.
ನಂತರ ಈ ಬಗ್ಗೆ ಅನೇಕ ಮಂದಿ ಕಮೆಂಟ್ ಹಾಕಿದ್ದರು. ಕೆಲವರು ತಮಗೂ ಇದೇ ಅನುಭವ ಆಗಿರುವ ಬಗ್ಗೆ ಬರೆದುಕೊಂಡಿದ್ದರು.
ಯುವತಿ ನೀಡಿದ್ದ ದೂರಿನ ಆಧಾರದ ಮೇಲೆ ಪೊಲೀಸರು ತನಿಖೆ ಕೈಗೊಂಡರು. ಅಕ್ಟೋಬರ್ 17 ಮತ್ತು ಅಕ್ಟೋಬರ್ 20ರ ನಡುವಿನ ಅವಧಿಯಲ್ಲಿ ಮಹಿಳೆಯರಿಗೆ ಯಾವ ಯಾವ ಪ್ರದೇಶದಲ್ಲಿ ಈ ರೀತಿ ಅನುಭವ ಆಗಿದೆ ಎಂಬ ಬಗ್ಗೆ ಮಾಹಿತಿ ಕಲೆ ಹಾಕಿದ ಪೊಲೀಸರು ಆ ಸ್ಥಳಗಳ ಸಿಸಿಟಿವಿ ದೃಶ್ಯಗಳನ್ನು ನೋಡಿದರು.
ನಾಲ್ಕೈದು ಮಹಿಳೆಯರ ಎದುರು ಬಂದು ಅಸಭ್ಯವಾಗಿ ವರ್ತಿಸಿದ್ದ ಈ ಯುವಕನ ಬಗ್ಗೆ ಸಿಸಿಟಿವಿಯಲ್ಲಿ ಕಾಣಿಸಿತು. ಎಲ್ಲದರಲ್ಲಿಯೂ ಅದೇ ಯುವಕ, ಅದೇ ಬೂದು ಬಣ್ಣದ ಕಾರು. ಆದರೆ ಪತ್ತೆ ಮಾಡುವುದು ಹೇಗೆ? ನಂತರ ಕಾರಿನ ನಂಬರ್ ಪ್ಲೇಟನ್ನು ಚೆಕ್ ಮಾಡಲಾಯಿತು. ಆದರೆ ಬುದ್ಧಿವಂತ ಆತ ನೋಂದಣಿ ಫಲಕವನ್ನು ಭಾಗಶಃ ಬಟ್ಟೆಯಿಂದ ಮುಚ್ಚಿದ್ದ!
ಪೊಲೀಸರು ಬಿಟ್ಟಾರೆಯೇ? ಆ ಕಾರು ಎಲ್ಲೆಲ್ಲಿಗೆ ಹೋಗಿದೆ ಎಂಬ ಬಗ್ಗೆ ಸಿಸಿಟಿವಿ ಆಧರಿಸಿ ಪತ್ತೆಹಚ್ಚಲು ಶುರು ಮಾಡಿದರು. ನಂತರ ಆತನ ಕಾರು ಜನಕಪುರಿ ಕಡೆಗೆ ಹೋಗುತ್ತಿರುವುದು ತಿಳಿದುಬಂತು. ಸಿಸಿಟಿವಿಯನ್ನೇ ಆಧರಿಸಿ ಕೊನೆಗೂ ಆತನ ಮನೆಗೆ ಹೋದರು.
ಆತನನ್ನು ಬಂಧಿಸಿಯೂ ಆಯಿತು. ನಂತರ ಅವನ ಜಾತಕ ಬಿಚ್ಚಿದಾಗ ಪೊಲೀಸರೇ ದಂಗಾಗಿ ಹೋದರು. ಕಾರಣ ಆತನೊಬ್ಬ ಸಬ್ ಇನ್ಸ್ಪೆಕ್ಟರ್! ಪುನೀತ್ ಗ್ರೆವಾಲ್ ಎಂಬ ಸಬ್ ಇನ್ಸ್ಪೆಕ್ಟರ್ ಟ್ರಾಫಿಕ್ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದಾನೆ.
ಈಗ ಈ ಪೊಲೀಸ್, ಪೊಲೀಸರ ಅತಿಥಿ! ಅಪ್ರಾಪ್ತೆಯೂ ಸೇರಿದಂತೆ ನಾಲ್ಕೈದು ಮಂದಿ ಈತನ ಅಸಭ್ಯ ವರ್ತನೆ ಕುರಿತು ದೂರು ದಾಖಲಿಸಿದ್ದಾರೆ. ಸದ್ಯ 14 ದಿನಗಳ ಈತನನ್ನು ನ್ಯಾಯಾಂಗ ಬಂಧನದಲ್ಲಿ ಇರಿಸಲಾಗಿದೆ.
ಈತನ ಪತ್ನಿ ಶಿಕ್ಷಕಿಯಾಗಿದ್ದಾರೆ. ಅವರ ಹೆಸರಿನಲ್ಲಿ ಈ ಕಾರು ನೋಂದಣಿಯಾಗಿದೆ. ಈತನಿಗೆ ಒಬ್ಬಳು ಮಗಳೂ ಇದ್ದಾಳೆ! ಸದ್ಯ ಆರೋಪಿಯ ವಿರುದ್ಧ ದೆಹಲಿ ಪೊಲೀಸರು ಕಿರುಕುಳ, ಪೋಕ್ಸೊ ಮೊದಲಾದ ಕಾಯ್ದೆಗಳಡಿಯಲ್ಲಿ ಪ್ರಕರಣ ದಾಖಲಿಸಿ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದಾರೆ.