

ಲಖನೌ: ಜಾತಿ- ಪದ್ಧತಿಯೇ ತುಂಬಿರುವ ಈ ಸಮಾಜದಲ್ಲಿ ಕೆಲವರನ್ನು ಇನ್ನೂ ಅಸಡ್ಡೆ, ತಾತ್ಸಾರದಿಂದ ಕಾಣುವುದು ಹೊಸತೇನಲ್ಲ. ಒಂದು ದಿನ ಮನೆಯಲ್ಲಿ ಶೇಖರಣೆಯಾದ, ರಸ್ತೆಯಲ್ಲಿ ಬಿದ್ದಿರುವ ಕಸಗಳನ್ನು ತೆಗೆದುಕೊಂಡು ಹೋಗಲು ಬರಲಿಲ್ಲವೆಂದರೆ, ಪರಿತಪಿಸಿ ಸಂಕಟಪಡುವವರೂ ಚಿಂದಿ ಆಯುವವರು, ಕಸ ವಿಲೇವಾರಿ ಮಾಡುವವರು ಎಂದರೆ ಮೂಗುಮುರಿಯುತ್ತಾರೆ.
ಇಂಥದ್ದೇ ನೋವನ್ನು, ಹೀಯಾಳಿಕೆಯನ್ನು ಪ್ರತಿದಿನವೂ ಕೇಳುತ್ತಲೇ ಬಂದ ಚಿಂದಿ ಆಯುವವರೊಬ್ಬರ ಮಗ, ಇದೀಗ ಸಾಧನೆ ಮಾಡುವ ಮೂಲಕ ತನ್ನನ್ನು ಮೂದಲಿಸುವವರಿಗೆ ದಿಟ್ಟ ಉತ್ತರ ನೀಡಿದ್ದಾನೆ. ಟ್ಯೂಷನ್, ಆ ಸೌಲಭ್ಯ, ಈ ಸೌಲಭ್ಯ ಎಲ್ಲ ಇದ್ದರೂ, ಬೇಕಾದಷ್ಟು ಅನುಕೂಲಗಳನ್ನು ಪಡೆದುಕೊಂಡವರು ಕೂಡ ಉತ್ತೀರ್ಣರಾಗಲು ಹರಸಾಹಸ ಪಡುವ ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆಯನ್ನು (ನೀಟ್) ಈ ಯುವಕ ಪಾಸ್ ಮಾಡಿದ್ದಾನೆ. ಈ ಮೂಲಕ ವೈದ್ಯನಾಗುವ ಕನಸನ್ನು ಈಡೇರಿಸಿಕೊಂಡು, ಹಿಯಾಳಿಸುವವರಿಗೆ ತಕ್ಕ ಉತ್ತರ ನೀಡಿದ್ದಾನೆ.
ಇಂಥದ್ದೊಂದು ಸಾಧನೆ ಮಾಡಿರುವ ಯುವಕನ ಹೆಸರು ಅರವಿಂದ ಕುಮಾರ್. ಉತ್ತರ ಪ್ರದೇಶದ ಈ ಯುವಕ ಒಂಬತ್ತನೇ ಪ್ರಯತ್ನದಲ್ಲಿ ನೀಟ್ ಪರೀಕ್ಷೆಯನ್ನು ಪಾಸ್ ಮಾಡಿದ್ದಾನೆ. ಈ ಮೂಲಕ ನೀಟ್ ಪರೀಕ್ಷೆಯನ್ನು ಪಾಸ್ ಮಾಡಿರುವ ಸಾಧನೆ ಮಾತ್ರವಲ್ಲದೇ, ನನ್ನ ಕುಟುಂಬ ಎದುರಿಸುತ್ತಿರುವ ಅವಮಾನವನ್ನೂ ನಾನು ಪಾಸ್ ಮಾಡಿದ್ದೇನೆ ಎನ್ನುತ್ತಾನೆ ಅರವಿಂದ.
ಚಿಂದಿ ಆಯುವವರು ಎಂದು ಬಾಲ್ಯದಿಂದಲೂ ನಮ್ಮ ಕುಟುಂಬವನ್ನು ಹೀಯಾಳಿಸುತ್ತಲೇ ಬಂದಿದ್ದರು. ಈ ಅವಮಾನದ ಕಾರಣದಿಂದಲೇ ಜೀವನದಲ್ಲಿ ಸಾಧನೆ ಮಾಡಬೇಕು ಎಂಬ ದೃಢಮನಸ್ಸು ಮಾಡಿಕೊಂಡಿದ್ದೆ. ಆದ್ದರಿಂದ ವೈದ್ಯನಾಗಲು ನಿರ್ಧರಿಸಿದ್ದೆ. ಮನೆಯಲ್ಲಿ ಯಾವ ಅನುಕೂಲ ಇಲ್ಲದಿದ್ದರೂ ನನ್ನ ಗುರಿ ಮಾತ್ರ ದೃಢವಾಗಿತ್ತು ಎನ್ನುತ್ತಾನೆ ಅರವಿಂದ.
ನೀಟ್ ಪರೀಕ್ಷೆಯನ್ನು ತೆಗೆದುಕೊಂಡಾಗ ಯಾವುದೇ ತರಬೇತಿ ಇಲ್ಲದ ಕಾರಣ, ಮೊದಲೆಲ್ಲಾ ಪಾಸ್ ಆಗಲು ಕಷ್ಟವಾಯಿತು. ಆದರೆ ನನ್ನ ಗುರಿ, ನನ್ನ ಕುಟುಂಬಕ್ಕೆ ಆಗುತ್ತಿರುವ ಅವಮಾನ ನನ್ನ ಕಣ್ಣೆದುರು ಇತ್ತು. ಅದನ್ನೇ ಸವಾಲಾಗಿ ಸ್ವೀಕರಿಸಿ ಪರೀಕ್ಷೆ ಬರೆಯುತ್ತಲೇ ಹೋದೆ. ಇದೀಗ ಒಂಬತ್ತನೇ ಬಾರಿ ನನ್ನ ಕನಸು ನನಸಾಗಿದೆ ಎಂದು ಖುಷಿಯಿಂದ ಹೇಳುತ್ತಾನೆ ಅರವಿಂದ. ಅಖಿಲ ಭಾರತದ ಮಟ್ಟದಲ್ಲಿ 11603 ರ್ಯಾಂಕ್ ಪಡೆದುಕೊಂಡಿದ್ದಾನೆ. ಇತರ ಹಿಂದುಳಿದ ವರ್ಗಗಳ (ಒಬಿಸಿ) ವಿಭಾಗದಲ್ಲಿ 4,392 ನೇ ಸ್ಥಾನವನ್ನು ಗಳಿಸಿದ್ದಾನೆ.
ಈ ಯುವಕನ ತಂದೆ ಕಲಿತದ್ದು 5ನೇ ತರಗತಿಯವರೆಗೆ ಮಾತ್ರ. ತಾಯಿ ಶಾಲೆಗೆ ಹೋಗಿಲ್ಲ. ಚಿಂದಿ ಆಯುವ ಕೆಲಸದಿಂದಾಗಿ ಅವಮಾನಕ್ಕೆ ಒಳಗಾಗಿ ಊರನ್ನೇ ತೊರೆಯಬೇಕಾದ ಘಟನೆಯೂ ನನ್ನ ಜೀವನದಲ್ಲಿ ನಡೆದಿದೆ. ನಾನು ಕೂಡ ಇದೇ ಹಾದಿಯನ್ನು ತುಳಿಯಬಾರದು ಎನ್ನುವ ಕಾರಣಕ್ಕೆ ಅಪ್ಪ-ಅಮ್ಮ ಚೆನ್ನಾಗಿ ಓದಿಸಿದರು. 10ನೇ ತರಗತಿಯನ್ನು ಕೇವಲ 48.6 ಶೇಕಡಾ ಅಂಕಗಳೊಂದಿಗೆ ಪೂರ್ಣಗೊಳಿಸಿದೆ. 12ನೇ ತರಗತಿಯಲ್ಲಿ ಸ್ವಲ್ಪ ಸುಧಾರಣೆಯನ್ನು ತೋರಿಸಿದೆ. 60 ಪ್ರತಿಶತ ಅಂಕ ಬಂತು. ನಂತರ ವೈದ್ಯನಾಗುವ ಕನಸು ಕಂಡೆ. ಅದಕ್ಕಾಗಿ ನೀಟ್ ಬರೆದೆ ಎನ್ನುತ್ತಾನೆ ಅರವಿಂದ.
ಅರವಿಂದ ಮಾತ್ರವಲ್ಲದೇ ಅವನಿಗೆ ಸಹೋದರರೂ ಇರುವ ಕಾರಣ, ಎಲ್ಲರಿಗೂ ಶಿಕ್ಷಣ ದೊರಕಿಸಿಕೊಡುವ ಉದ್ದೇಶದಿಂದ ಅವರ ತಂದೆ ಊರಿನಿಂದ 800-900 ಹೋಗಿ ಕೂಲಿ ಕೆಲಸ ಮಾಡತೊಡಗಿದರು. ಆಗೊಮ್ಮೆ ಈಗೊಮ್ಮೆ ಅಷ್ಟೇ ಮನೆಗೆ ಭೇಟಿ ನೀಡುತ್ತಿದ್ದರು. ತಮ್ಮ ದುಡಿತದ ಹಣವನ್ನೆಲ್ಲಾ ಮಕ್ಕಳ ವಿದ್ಯಾಭ್ಯಾಸಕ್ಕೆ ಖರ್ಚು ಮಾಡಿದ್ದಾರೆ.
ಮೂಳೆ ಶಸ್ತ್ರಚಿಕಿತ್ಸಕರಾಗಲು ಅರವಿಂದ ಇಚ್ಛೆಪಟ್ಟಿದ್ದಾರೆ. ಸಣ್ಣ ಮೂಳೆ ಗಾಯವೂ ಸಹ ಬಹಳಷ್ಟು ನೋವುಂಟುಮಾಡುತ್ತದೆ. ಹೆಚ್ಚುತ್ತಿರುವ ರಸ್ತೆ ಅಪಘಾತಗಳು ನನಗೆ ತುಂಬಾ ತೊಂದರೆ ನೀಡುತ್ತವೆ, ಆದ್ದರಿಂದ ನಾನು ಮೂಳೆ ಶಸ್ತ್ರಚಿಕಿತ್ಸಕನಾಗಿ ಜನರಿಗೆ ಸೇವೆ ಸಲ್ಲಿಸಲು ಬಯಸುತ್ತೇನೆ" ಎಂದಿದ್ದಾನೆ ಈ ಯುವಕ.
ಆದರೆ ಇವರ ನೋವಿನ ದಿನಗಳು ಮುಗಿದಿಲ್ಲ. ಇಂಥ ಒಬ್ಬ ಯುವಕ ದೊಡ್ಡ ಮಟ್ಟದ ಸಾಧನೆ ಮಾಡಿದ್ದನ್ನು ಸಹಿಸಲು ಸಾಧ್ಯವಾಗದವರು, ಕ್ರಿಮಿನಲ್ ಪ್ರಕರಣವೊಂದರಲ್ಲಿ ಇವರ ಕುಟುಂಬಸ್ಥರನ್ನು ಸಿಲುಕಿಸಲು ಪ್ರಯತ್ನ ಪಡುತ್ತಿದ್ದಾರಂತೆ. ಈ ಬಗ್ಗೆ ಅರವಿಂದ್ ಮಾಧ್ಯಮಗಳ ಎದುರು ನೋವು ತೋಡಿಕೊಂಡಿದ್ದಾರೆ.