ಮತಾಂತರವೆಂಬ ಭಯಾನಕ ನರಕ ಅನುಭವಿಸಿದ್ದೆ- ಗಾಯಕ ವಾಜಿದ್‌ ಖಾನ್​ ಪತ್ನಿ ಬಿಚ್ಚಿಟ್ಟಿದ್ದಾರೆ ಕರಾಳ ಅನುಭವ...

wazid
Published on

ಮುಂಬೈ: ಉತ್ತರ ಪ್ರದೇಶದ ಮತಾಂತರ ನಿಷೇಧ ಕಾಯ್ದೆಯ ಕುರಿತಂತೆ ಇದೀಗ ದೇಶಾದ್ಯಂತ ಭಾರಿ ಸಂಚಲನ ಸೃಷ್ಟಿಯಾಗಿದೆ. ಈ ನಡುವೆಯೇ ಮತಾಂತರದ ಕುರಿತಂತೆ ತಮಗಾಗಿರುವ ನೋವಿನ ಕುರಿತು ಕೆಲವರು ಬಹಿರಂಗವಾಗಿ ಮಾತನಾಡಲು ಧೈರ್ಯ ತೋರಿದ್ದರೆ, ಇದಾಗಲೇ ಮತಾಂತರದ ವಿರುದ್ಧ ಉತ್ತರ ಪ್ರದೇಶದಲ್ಲಿ ಕೇಸ್​ ಕೂಡ ದಾಖಲಾಗಿದೆ.

ಇದೀಗ ಬಾಲಿವುಡ್‌ನ‌ ಖ್ಯಾತ ಸಂಗೀತ ಸಂಯೋಜಕ- ಗಾಯಕ ವಾಜಿದ್‌ ಖಾನ್‌ ಅವರ ಪತ್ನಿ ಕಮಲ್​ರುಖ್​ ಖಾನ್​ ತಮಗಾಗಿದ್ದ ಭಯಾನಕ ಕಿರುಕುಳದ ಕುರಿತು ಬಹಿರಂಗವಾಗಿ ಹೇಳಿಕೆ ನೀಡಿದ್ದಾರೆ. ಕರೊನಾ ವೈರಸ್​ನಿಂದಾಗಿ ಈಚೆಗಷ್ಟೇ ವಾಜಿದ್​ ಖಾನ್​ ಮೃತಪಟ್ಟ ಬಳಿಕ ಕಮಲ್​ರುಖ್​ ತಮಗಾಗಿರುವ ಹಿಂಸೆಯ ಕುರಿತು ಮಾತನಾಡುವ ಧೈರ್ಯ ಮಾಡಿದ್ದಾರೆ.

ಇಸ್ಲಾಂ ಧರ್ಮಕ್ಕೆ ಮತಾಂತರಗೊಳ್ಳದ ಕಾರಣ ತನ್ನ ತಾನು ಅನುಭವಿಸಿರುವ ಕಿರುಕುಳಗಳ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಸುದೀರ್ಘವಾಗಿ ಹಂಚಿಕೊಂಡಿದ್ದಾರೆ. “ಮತಾಂತರ ವಿರೋಧಿ ಮಸೂದೆ’ ಎಂಬ ಹ್ಯಾಷ್​ಟ್ಯಾಗ್‌ನೊಂದಿಗೆ ಅವರು ತಮ್ಮ ಕಥೆ ಬಿಚ್ಚಿಟ್ಟಿದ್ದು ಹೀಗೆ...

'ನಾನು ಮೂಲತಃ ಪಾರ್ಸಿ ಜನಾಂಗದವಳು. ವಾಜಿದ್‌ ಅವರನ್ನು ಸುಮಾರು 10 ವರ್ಷ ಪ್ರೀತಿಸಿ, ವಿಶೇಷ ವಿವಾಹ ಕಾಯ್ದೆಯಡಿ ಮದುವೆಯಾಗಿದ್ದೆ. ಆದರೆ ಅವರ ತಾಯಿ ಮತ್ತು ಕುಟುಂಬದ ಸದಸ್ಯರು ಮುಸ್ಲಿಂ ಧರ್ಮಕ್ಕೆ ಮತಾಂತರಗೊಳ್ಳುವಂತೆ ಭಾರೀ ಒತ್ತಡ ಹೇರಿದ್ದರು. ನಾನು ಒಪ್ಪಿರಲಿಲ್ಲ. ವಾಜಿದ್​ ಕೂಡ ಮೌನವಾಗಿಬಿಟ್ಟರು. ನಾನೆಷ್ಟೇ ಮತಾಂತರಕ್ಕೆ ವಿರೋಧಿಸಿದರೂ ದಿನದಿಂದ ದಿನಕ್ಕೆ ನನ್ನ ಮೇಲೆ ಕಿರುಕುಳ ಹೆಚ್ಚುತ್ತಲೇ ಹೋಯಿತೇ ವಿನಾ, ಕುಟುಂಬದಲ್ಲಿ ಯಾರೊಬ್ಬರೂ ನನ್ನ ಪರವಾಗಿ ನಿಲ್ಲಲಿಲ್ಲ.

'ಸ್ವಾತಂತ್ರ್ಯಕ್ಕೆ ಹೆಚ್ಚು ಅವಕಾಶ ನೀಡಿ, ಎಲ್ಲಾ ಹಂತದ ಶಿಕ್ಷಣಕ್ಕೂ ಪ್ರೋತ್ಸಾಹ ನೀಡಿದೆ ಪಾರ್ಸಿ ಧರ್ಮ. ಆದರೆ ಗಂಡನ ಮನೆಯಲ್ಲಿ ದೊಡ್ಡ ಸಮಸ್ಯೆಯೇ ಆಗಿಹೋಯಿತು. ಎಂದಿಗೂ ಎಲ್ಲಾ ಧರ್ಮದ ನಂಬಿಕೆಗಳನ್ನು ಗೌರವಿಸಿದ್ದೇನೆ ಮತ್ತು ಆಚರಿಸಿದ್ದೇನೆ. ಆದರೆ ಈ ಮತಾಂತರ ವಿಚಾರದಿಂದ ಸಂಬಂಧಗಳಿಗೆ ಬೆಲೆ ಇಲ್ಲದಂತಾಗಿದೆ.

ಮತಾಂತರದ ಕಿರುಕುಳ ಎಷ್ಟು ಭಯಾನಕ ರೂಪ ತಳೆದಿತ್ತು ಎಂದು ಬಣ್ಣಿಸುವುದೇ ಕಷ್ಟ. ಅಷ್ಟು ಕರಾಳ ದಿನಗಳನ್ನು ನಾನು ನೋಡಿದೆ. ಈ ಕಿರುಕುಳ ತಾಳಲಾರದೆ ನಾನು ವಾಜಿದ್‌ ಜತೆಗಿನ ದಾಂಪತ್ಯ ಜೀವನದಿಂದಲೇ ಹೊರಬರಬೇಕಾಯಿತು. 10 ವರ್ಷಗಳ ನಮ್ಮ ಪ್ರೀತಿ ಈ ಮತಾಂತರವೆಂಬುದು ಹೊಸಕಿ ಹಾಕಿತ್ತು’ ಎಂದು ಕಮಲ್​ರುಖ್​ ಹೇಳಿಕೊಂಡಿದ್ದಾರೆ.

ಮತಾಂತರ ವಿರೋಧಿ ಮಸೂದೆ ಚರ್ಚೆಯ ಹಿನ್ನೆಲೆಯಲ್ಲಿ ಈ ಪೋಸ್ಟ್‌ ಹಾಕುತ್ತಿದ್ದಾನೆ. ವಾಜಿದ್‌ ಒಬ್ಬ ಅದ್ಭುತ ಟ್ಯಾಲೆಂಟ್‌ ಹೊಂದಿದ ವ್ಯಕ್ತಿ. ನಾನು, ನನ್ನ ಮಕ್ಕಳು ಅವನನ್ನು ಈಗಲೂ ಮಿಸ್‌ ಮಾಡಿಕೊಳ್ಳುತ್ತಿದ್ದೇವೆ ಎಂದೂ ನೋವು ತೋಡಿಕೊಂಡಿದ್ದಾರೆ.

ಇವರಿಗೆ 16 ವರ್ಷದ ಮಗಳು ಹಾಗೂ 9 ವರ್ಷದ ಮಗ ಇದ್ದಾರೆ. ಮತಾಂತರಗೊಳ್ಳುವ ಮೂಲಕ ವಾಜಿದ್ ಖಾನ್ ಮತ್ತು ಅವರ ಕುಟುಂಬದತ್ತ ಬಾಗಲು ಘನತೆ ಮತ್ತು ಸ್ವಾಭಿಮಾನ ಅವಕಾಶ ನೀಡಲಿಲ್ಲ. ಈ ಮತಾಂತರ ನಾನು ಭಾವಿಸಿದಷ್ಟು ಸುಲಭವಾಗಿಲ್ಲ ಎಂದು ಅವರು ಹೇಳಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net