

ಕೊಚ್ಚಿ (ಕೇರಳ): ಇಬ್ಬರು ವಯಸ್ಕರು ಪರಸ್ಪರ ಒಪ್ಪಿ ಲೈಂಗಿಕ ಕ್ರಿಯೆ ನಡೆಸಿ ಕೊನೆಗೆ ಮದುವೆಯಾಗಲು ನಿರಾಕರಿಸಿದರು ಎನ್ನುವ ಮಾತ್ರಕ್ಕೆ ಅದು ಅತ್ಯಾಚಾರ ಆಗುವುದಿಲ್ಲ ಎಂದು ಕೇರಳ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ.
ಈ ಮೂಲಕ ದೈಹಿಕ ಸಂಪರ್ಕಕ್ಕೆ ಒಪ್ಪಿಗೆ ನೀಡುವ ಪೂರ್ವದಲ್ಲಿ ಹತ್ತಾರು ಬಾರಿ ಯೋಚಿಸುವ ಅಗತ್ಯತೆಯ ಕುರಿತು ಕೋರ್ಟ್ ಪರೋಕ್ಷವಾಗಿ ಬುದ್ಧಿ ಹೇಳಿದೆ. ಇಬ್ಬರು ಪ್ರಾಪ್ತ ವಯಸ್ಕರ ನಡುವಿನ ಲೈಂಗಿಕ ಸಂಬಂಧವನ್ನ ಸೆಕ್ಷನ್ 376ರ ಅಡಿ ಅತ್ಯಾಚಾರ ಎಂದು ಪರಿಗಣಿಸಲು ಸಾಧ್ಯವಿಲ್ಲ. ಜೋಡಿಗಳು ತಮ್ಮ ನಡುವಿನ ಸಂಬಂಧ ಮುರಿದುಕೊಂಡ ಬಳಿಕ, ಅತ್ಯಾಚಾರದ ಕೇಸ್ ಹಾಕುತ್ತಿರುವ ಪ್ರಕರಣಗಳು ಹೆಚ್ಚುತ್ತಿವೆ ಎಂದು ಕೋರ್ಟ್ ಅಭಿಪ್ರಾಯ ಪಟ್ಟಿದೆ.
ಆದರೆ ಮದುವೆಯಾಗುವ ಭರವಸೆ ನೀಡಿ ಒತ್ತಾಯಪೂರ್ವಕವಾಗಿ ಲೈಂಗಿಕ ಕ್ರಿಯೆ ನಡೆಸಿದರೆ ಅದು ಅಪರಾಧವಾಗುತ್ತದೆ, ಅದು ಅತ್ಯಾಚಾರ ಎಂದು ಎನಿಸಿಕೊಳ್ಳುತ್ತದೆ ಎಂದೂ ನ್ಯಾಯಮೂರ್ತಿ ಬೆಚ್ಚು ಕುರಿಯನ್ ಥಾಮಸ್ ನೇತೃತ್ವದ ಪೀಠ ಇದೇ ವೇಳೆ ಸ್ಪಷ್ಟಪಡಿಸಿದೆ.
ಅತ್ಯಾಚಾರದ ಆರೋಪದಲ್ಲಿ ಸಿಲುಕಿರುವ ಕೇಂದ್ರ ಸರ್ಕಾರಿ ವಕೀಲರೊಬ್ಬರಿಗೆ ಜಾಮೀನು ನೀಡಿರುವ ಕೋರ್ಟ್ ಈ ಆದೇಶ ಹೊರಡಿಸಿದೆ. ಈ ವಕೀಲರು ತಮ್ಮ ಸಹೊದ್ಯೋಗಿ ಜತೆಗೆ ನಾಲ್ಕು ವರ್ಷ ಒಪ್ಪಿಗೆಯ ಮೇಲೆ ಲೈಂಗಿಕ ಸಂಬಂಧ ಹೊಂದಿದ್ದರು. ನಂತರ ಬೇರೊಬ್ಬಳ ಜತೆ ಮದುವೆ ಮಾಡಿಕೊಳ್ಳಲು ನಿರ್ಧರಿಸಿದ್ದರು. ಇದರ ಬಗ್ಗೆ ಮಾಹಿತಿ ಗೊತ್ತಾಗುತ್ತಿದ್ದಂತೆ ಯುವತಿ ಆತ್ಮಹತ್ಯೆ ಮಾಡಿಕೊಳ್ಳಲು ಯತ್ನಿಸಿದ್ದಳು.
ಈ ಹಿನ್ನೆಲೆಯಲ್ಲಿ ವಕೀಲರನ್ನು ಪೊಲೀಸರಿಗೆ ಬಂಧಿಸಿದ್ದರು. ಇವರ ವಿರುದ್ಧ ಅತ್ಯಾಚಾರದ ಕೇಸ್ ದಾಖಲಾಗಿತ್ತು. ಜಾಮೀನು ಕೋರಿ ಅವರು ಅರ್ಜಿ ಸಲ್ಲಿಸಿದ್ದರು. ಮಹಿಳೆ ಜತೆ ನಡೆದ ಲೈಂಗಿಕ ಸಂಬಂಧ ಒಮ್ಮತದಿಂದ ಕೂಡಿತ್ತು. ಇದು ಸಂಪೂರ್ಣವಾಗಿ ಒಪ್ಪಿಗೆ ಮತ್ತು ಪ್ರೀತಿಯಿಂದ ನಡೆದಿದೆ ಎಂದು ವಕೀಲರು ವಾದಿಸಿದ್ದರು. ವಾದ - ಪ್ರತಿವಾದ ಆಲಿಸಿರುವ ಕೋರ್ಟ್ ಪ್ರಕರಣ ಗಂಭೀರ ಸ್ವರೂಪದಾಗಿದೆ. ಹೀಗಾಗಿ, ಆರೋಪಿ ಬೇರೆ ಕಡೆ ಪಲಾಯನ ಮಾಡುವಂತಿಲ್ಲ. ಆದರೆ, ಇದನ್ನು ಅತ್ಯಾಚಾರ ಎನ್ನಲಾಗದು ಎಂದಿದೆ.