ಪ್ರಿಯಕರನ ಒಲಿಸಿಕೊಳ್ಳಲು ಆತನ ಪತ್ನಿ, ತಾಯಿಯನ್ನು ಜೀವಂತ ಸುಟ್ಟು ಹಾಕಿದ ಎರಡು ಮಕ್ಕಳ ತಾಯಿ!

illegal
Published on

ಕೊಮರಗಿರಿಪಟ್ಟಣಂ (ಆಂಧ್ರಪ್ರದೇಶ): ತನಗೆ ಕೈಕೊಟ್ಟು ಬೇರೆಯವಳನ್ನು ಮದುವೆಯಾದ ಪ್ರಿಯಕರ ಪುನಃ ತನ್ನ ಬಳಿಗೆ ಬರುವಂತೆ ಮಾಡಲು ಎರಡು ಮಕ್ಕಳ ಕೈಯಿಂದಲೇ ಮಹಾ ಅಪರಾಧ ಮಾಡಿಸಿ ಸಿಕ್ಕಿಬಿದ್ದಿದ್ದಾಳೆ ಆಂಧ್ರಪ್ರದೇಶದ ಕೊಮರಗಿರಿಪಟ್ಟಣದ ಮಹಿಳೆ!

ನಾಗಲಕ್ಷ್ಮಿ ಎಂಬ ಎರಡು ಮಕ್ಕಳ ತಾಯಿ ಇಂಥದ್ದೊಂದು ಕೃತ್ಯ ಎಸಗಿದ್ದಾಳೆ. ತನ್ನ ಜತೆ ಅಕ್ರಮ ಸಂಬಂಧ ಹೊಂದಿದ್ದ ಸುರೇಶ್​ ಎಂಬಾತ ಬೇರೊಂದು ಮದುವೆಯಾದ ಕಾರಣಕ್ಕೆ ಆತನ ಪತ್ನಿ ಮತ್ತು ತಾಯಿಯನ್ನು ಸಜೀವ ದಹನ ಮಾಡಿದ್ದಾಳೆ. ಪ್ರಿಯಕರ ಮನೆಯಲ್ಲಿ ಇಲ್ಲದ ಸಮಯದಲ್ಲಿ ಮಕ್ಕಳ ಕೈಯಿಂದ ಆತನ ಮನೆಗೆ ಬೆಂಕಿ ಹಚ್ಚಿಸಿದ್ದಾಳೆ. ಇದರಿಂದ ಸುರೇಶ್​ನ ಪತ್ನಿ ಜ್ಯೋತಿ ಮತ್ತು ತಾಯಿ ಮಂಗಾದೇವಿ ಸಜೀವ ದಹನವಾಗಿದ್ದಾರೆ.

ಮನೆಗೆ ಬೆಂಕಿ ಬಿದ್ದದ್ದು ಆಕಸ್ಮಿಕ ಎಂದು ಭಾವಿಸಿದ್ದ ಪೊಲೀಸರು ತನಿಖೆ ಕೈಗೊಂಡಾಗ ಕೃತ್ಯ ಬೆಳಕಿಗೆ ಬಂದಿದೆ. ಇದೇ 2ರಂದು ಸುರೇಶ್​ ಮನೆಯಲ್ಲಿ ಇಲ್ಲದ ಸಮಯದಲ್ಲಿ ಮನೆಗೆ ಬೆಂಕಿ ಬಿದ್ದಿತ್ತು. ಇದರ ಹಿನ್ನೆಲೆ ಕೆದಕಿದ ಪೊಲೀಸರ ಕೈಗೆ ಸಿಕ್ಕಿದ್ದು ಆರೋಪಿ ನಾಗಲಕ್ಷ್ಮಿ ಹಾಗೂ ಆಕೆಯ ಇಬ್ಬರು ಹೆಣ್ಣು ಮಕ್ಕಳು.

ಜ್ಯೋತಿಯ ಮದುವೆ ಕಳೆದ ಮೇ ತಿಂಗಳಿನಲ್ಲಿ ಸುರೇಶ್ ಜತೆ ನಡೆದಿತ್ತು. ತನ್ನ ಪ್ರಿಯಕರ ಬೇರೊಂದು ಮದುವೆಯಾಗಿದ್ದು ನಾಗಲಕ್ಷ್ಮಿಗೆ ಸಹಿಸಿಕೊಳ್ಳಲು ಸಾಧ್ಯವಾಗಲಿಲ್ಲ. ದಂಪತಿಯನ್ನು ಬೇರೆ ಬೇರೆ ಮಾಡಲು ಎಲ್ಲಾ ರೀತಿ ಪ್ರಯತ್ನ ಮಾಡಿದ್ದಾಳೆ. ಜ್ಯೋತಿ ಅವರಿಗೆ ಬೇರೊಂದು ಸಂಬಂಧ ಇದೆ ಎಂದು ಬಿಂಬಿಸುವ ಸಲುವಾಗಿ ಬೇರೆ ಬೇರೆಯವರ ಹೆಸರಿನಲ್ಲಿ ಪ್ರೇಮ ಪತ್ರ ಬರೆದಿದ್ದಾಳೆ. ಇದೂ ಅಲ್ಲದೇ ಅನೇಕ ರೀತಿಯ ಕುತಂತ್ರ ಮಾಡಿದ್ದಾಳೆ. ಆದರೆ ಇದಾವುದಕ್ಕೂ ಸುರೇಶ್​ ಜಗ್ಗಿರಲಿಲ್ಲ. ಇದು ಈಕೆಯದ್ದೇ ಕುತಂತ್ರ ಎಂದು ಆತನಿಗೆ ತಿಳಿದಿತ್ತು.

ಬೇರೆ ದಾರಿ ಕಾಣದ ನಾಗಲಕ್ಷ್ಮಿ ಕೊಲೆ ಮಾಡಲು ಯೋಜನೆ ರೂಪಿಸಿದ್ದಳು. ತನ್ನ ಪುತ್ರಿಯರ ಕೈಗೆ ಪೆಟ್ರೋಲ್ ಬಾಟಲ್ ಮತ್ತು ಬೆಂಕಿ ಪೊಟ್ಟಣ ಕೊಟ್ಟು ಕಳುಹಿಸಿದ್ದಳು. ತಾಯಿ ನಾಗಲಕ್ಷ್ಮಿ ಹೇಳಿದಂತೆಯೇ ಆ ಇಬ್ಬರು ಮಕ್ಕಳು ಜ್ಯೋತಿ ಮನೆಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದರು. ಸ್ಥಳೀಯರು ಬೆಂಕಿ ನಂದಿಸುವ ಪ್ರಯತ್ನಿಸಿದ್ದರೂ ಅಷ್ಟರಲ್ಲಿಯೇ ಇಬ್ಬರೂ ಸಜೀವ ದಹನವಾಗಿದ್ದರು.

ಪೊಲೀಸರು ತನಿಖೆ ಕೈಗೊಂಡಾಗ ಇದು ಸುರೇಶ್​ನ ಕೃತ್ಯ ಎಂದು ಅಂದುಕೊಂಡಿದ್ದರು. ಆದರೆ ಬೆಂಕಿ ಹೊತ್ತಿಕೊಂಡಾಗ ಇಬ್ಬರು ಓಡಿಹೋಗಿರುವುದನ್ನು ನೋಡಿರುವುದಾಗಿ ನೆರೆಹೊರೆಯವರು ಹೇಳಿದ್ದರು. ನಂತರ ತನಿಖೆಯಿಂದ ಸತ್ಯ ಬಯಲಾಗಿದೆ. ಇವರ ಅಕ್ರಮ ಸಂಬಂಧಕ್ಕೆ ಅಮಾಯಕ ಎರಡು ಜೀವಗಳು ಬಲಿಯಾಗಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net