

ನವದೆಹಲಿ: ಬಿಜೆಪಿ ಮುಖಂಡೆ ನೂಪುರ್ ಶರ್ಮಾ ಪ್ರವಾದಿ ಮೊಹಮ್ಮದ್ ಕುರಿತು ನೀಡಿರುವ ಹೇಳಿಕೆ ಹಲವು ದಿನಗಳಿಂದ ಭಾರಿ ವಿವಾದ ಸೃಷ್ಟಿಸಿದೆ. ಕಾಂಗ್ರೆಸ್ಸಿಗರು ಸೇರಿದಂತೆ ಇಸ್ಲಾಮಿಕ್ ರಾಷ್ಟ್ರಗಳು ಈ ಹೇಳಿಕೆ ವಿರುದ್ಧ ಇನ್ನಿಲ್ಲದ ಟೀಕೆಗಳನ್ನು ಮಾಡುತ್ತಿವೆ. ನೂಪುರ್ ಶರ್ಮಾ ಹೇಳಿಕೆಯನ್ನು ಬೆಂಬಲಿಸಿದ ಒಂದೇ ಕಾರಣಕ್ಕೆ ರಾಜಸ್ಥಾನದ ಉದಯಪುರದಲ್ಲಿ ಟೈಲರ್ ಕನ್ಹಯ್ಯಲಾಲ್ ಅವರ ಬರ್ಬರ ಹತ್ಯೆಯನ್ನೂ ಮಾಡಲಾಗಿದ್ದು, ಈ ಹಿಂಸಾಚಾರ ಇನ್ನಷ್ಟು ಉಗ್ರ ರೂಪ ಪಡೆಯುತ್ತಲೇ ಇದೆ.
ಮುಸ್ಲಿಂ ಧರ್ಮಗುರು ಜಾಕಿರ್ ನಾಯ್ಕ್ ಅವರು ಭಾಷಣವೊಂದಲ್ಲಿ ಪ್ರವಾದಿ ಮೊಹಮ್ಮದ್ ಕುರಿತು ಹೇಳಿರುವ ಹೇಳಿಕೆಯನ್ನೇ ವಿಡಿಯೋ ಸಹಿತವಾಗಿ ಸಾಕ್ಷ್ಯಾಧಾರ ನೀಡುವ ಮೂಲಕ ನೂಪುರ್ ಪುನರುಚ್ಚರಿಸಿದ್ದರು. ಆದರೆ ನೂಪುರ್ ನೀಡಿರುವ ಹೇಳಿಕೆಯನ್ನು ಮುಂದಿಟ್ಟುಕೊಂಡು ಇಡೀ ದೇಶಕ್ಕೆ ಬೆಂಕಿ ಹಚ್ಚುವ ಕೆಲಸ ಮಾಡುತ್ತಿದೆ ಒಂದು ವರ್ಗ.
ಆದರೆ ಈ ನಡುವೆಯೇ ಭಾರಿ ಕುತೂಹಲದ ಅಭಿಯಾನವೊಂದು ಸಾಮಾಜಿಕ ಜಾಲತಾಣದಲ್ಲಿ ಶುರುವಾಗಿದೆ. ಅದೇ ಅರೆಸ್ಟ್ ತಸ್ಲೀಮ್ ರೆಹಮಾನಿ (#ArrestTasleemRahmani) ಎಂಬ ಹ್ಯಾಷ್ಟ್ಯಾಗ್ ಬಳಸಿ ಇವರನ್ನು ಅರೆಸ್ಟ್ ಮಾಡುವಂತೆ ಚಳವಳಿಯನ್ನು ಶುರು ಮಾಡಲಾಗಿದೆ.
ಹಾಗಿದ್ದರೆ ಯಾರೀ ತಸ್ಲೀಮ್ ರೆಹಮಾನಿ? ಇವರಿಗೂ ನೂಪುರ್ ಶರ್ಮಾರ ಹೇಳಿಕೆಗೂ ಏನು ಸಂಬಂಧ ಎನ್ನುವ ವಿವರ ಇಲ್ಲಿದೆ ನೋಡಿ:
ಮುಸ್ಲಿಂ ರಾಜಕೀಯ ಮಂಡಳಿಯ ಅಧ್ಯಕ್ಷ, ಸೋಷಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾದ ಮುಖಂಡರಾಗಿದ್ದಾರೆ ತಸ್ಲೀಮ್ ರೆಹಮಾನಿ. ನೂಪುರ್ ಶರ್ಮಾ ಅವರು ಪ್ರವಾದಿ ಮೊಹಮ್ಮದ್ ಕುರಿತು ಹೇಳಿಕೆ ನೀಡಲು ಕಾರಣ ಇದೇ ತಸ್ಲೀಮ್. ರಾಷ್ಟ್ರೀಯ ವಾಹಿನಿಯೊಂದರಲ್ಲಿ ತಸ್ಲೀಮ್ ರೆಹಮಾನಿ ಶಿವ ಹಾಗೂ ಶಿವಲಿಂಗದ ಕುರಿತು ಅತ್ಯಂತ ಕೆಟ್ಟದ್ದಾಗಿ ಮಾತನಾಡಿದ್ದರು. ಜ್ಞಾನವಾಪಿಯಲ್ಲಿ ಶಿವಲಿಂಗದ ಬಗ್ಗೆ ಹಿಂದೂ ನಂಬಿಕೆಯನ್ನು ಅಪಹಾಸ್ಯಗೊಳಿಸುವಂತೆ, ಹಿಂದೂಗಳ ಧಾರ್ಮಿಕ ಭಾವನೆಗೆ ಧಕ್ಕೆ ತರುವಂತೆ ಈ ಹೇಳಿಕೆಯನ್ನು ನೀಡಲಾಗಿತ್ತು.
ಮೇ 26 ರ ರಾತ್ರಿ ಟೈಮ್ಸ್ ನೌ ಚಾನೆಲ್‌ನಲ್ಲಿ ಈ ಸಂದರ್ಶನದ ನೇರ ಪ್ರಸಾರ ಕೂಡ ಆಗಿತ್ತು. ಈ ಕಾರ್ಯಕ್ರಮದಲ್ಲಿ ನೂಪುರ್ ಶರ್ಮಾ, ತಸ್ಲೀಮ್ ರೆಹಮಾನಿ ಭಾಗವಹಿಸಿದ್ದರು. ಶಿವನ ಕುರಿತು ತಸ್ಲೀಮ್ ರೆಹಮಾನಿ ನೀಡಿದ್ದ ಹೇಳಿಕೆಯನ್ನು ಕೇಳಿ ನೂಪುರ್ ಶರ್ಮಾ ಅವರಿಗೆ ಸಹಿಸಿಕೊಳ್ಳುವುದು ಅಸಾಧ್ಯವಾಯಿತು. ಇದೇ ಕಾರಣಕ್ಕೆ ಹದೀಸ್‌ನಲ್ಲಿ ಬರೆದದ್ದನ್ನೇ ತಾವು ಉಲ್ಲೇಖಿಸುತ್ತಿರುವುದಾಗಿ ಹೇಳುವ ಮೂಲಕ ಪ್ರವಾದಿ ಮೊಹಮ್ಮದ್ ಅವರ ಕುರಿತು ಹೇಳಿಕೆ ನೀಡಿದ್ದರು. ಕೊನೆಗೆ ಇದು ರಾಜಕೀಯ ಸ್ವರೂಪ ಪಡೆದು ಮೂಲ ವಿಚಾರವನ್ನು ಕೈಬಿಟ್ಟ ಒಂದು ವರ್ಗ ಬಿಜೆಪಿಗೆ ಸೇರಿದ ನೂಪುರ್ ವಿರುದ್ಧ ತಿರುಗಿಬಿದ್ದು, ಹಿಂಸಾಚಾರದ ರೂಪ ಪಡೆಯುವ ಮಟ್ಟಿಗೆ ಈ ಘಟನೆಯನ್ನು ಕೊಂಡೊಯ್ದರು.
ಆದ್ದರಿಂದ ಕಂಡಕಂಡಲ್ಲಿ ನೂಪುರ್ ಶರ್ಮಾ ಅವರ ವಿರುದ್ಧ ಕೇಸ್ ಹಾಕಿರುವಾಗ, ಸುಪ್ರೀಂಕೋರ್ಟ್ ಕೂಡ ದೇಶದ ಕ್ಷಮೆ ಕೋರುವಂತೆ ನೂಪುರ್ ಅವರಿಗೇ ಸೂಚಿಸಿರುವಾಗ, ಈ ಘಟನೆಗೆ ಮೂಲ ಕಾರಣರಾಗಿರುವ ತಸ್ಲೀಮ್ ರೆಹಮಾನಿ ವಿರುದ್ಧ ಒಂದೇ ಒಂದು ಕೇಸ್ ದಾಖಲಾಗಲಿಲ್ಲವೇಕೆ ಎಂದು ಹಿಂದೂಗಳು ರೊಚ್ಚಿಗೆದ್ದಿದ್ದಾರೆ. ಆದ್ದರಿಂದ ಅರೆಸ್ಟ್ ತಸ್ಲೀಮ್ ರೆಹಮಾನಿ (#ArrestTasleemRahmani) ಎಂಬ ಹ್ಯಾಷ್ಟ್ಯಾಗ್ ಬಳಸಿ ಅಭಿಯಾನ ಶುರು ಮಾಡಿದ್ದಾರೆ. ಹಿಂದೂಗಳೇ ನಿಮಗೆ ನಾಚಿಕೆಯಾಗುವುದಿಲ್ಲವೆ? ನಿಮ್ಮ ದೇವರನ್ನು ಹೀಯಾಳಿಸಿದವರನ್ನು ಬಿಟ್ಟು, ಅದರ ವಿರುದ್ಧ ದನಿ ಎತ್ತಿರುವ ವಿರುದ್ಧ ಮಾತನಾಡುತ್ತಿರುವಿರಾ ಎಂದೆಲ್ಲಾ ಪ್ರಶ್ನೆಗಳನ್ನು ಜಾಲತಾಣದಲ್ಲಿ ಕೇಳಲಾಗುತ್ತಿದೆ.