

ಕಾರವಾರ: ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ನಿನ್ನೆಯಷ್ಟೇ ಅಧಿಕಾರ ಸ್ವೀಕರಿಸಿರುವ ಬಸವರಾಜ ಬೊಮ್ಮಾಯಿ ಅವರು ಮೊದಲಿಗೆ ಉತ್ತರ ಕನ್ನಡ ಜಿಲ್ಲೆಯ ಪ್ರವಾಹ ಪೀಡಿತ ಗ್ರಾಮಗಳಿಗೆ ಭೇಟಿ ನೀಡಲು ಮುಂದಾಗಿದ್ದಾರೆ.
ಇಂದು ಬೆಳಗ್ಗೆ 9-30ಕ್ಕೆ ಬೆಂಗಳೂರಿನಿಂದ ವಿಶೇಷ ವಿಮಾನದ ಮೂಲಕ ಬರುವ ಅವರು ಹುಬ್ಬಳ್ಳಿಗೆ ಆಗಮಿಸಲಿದ್ದು, 10-30ಕ್ಕೆ ರಸ್ತೆ ಮಾರ್ಗದ ಮೂಲಕ ಉತ್ತರಕನ್ನಡ ಜಿಲ್ಲೆಯ ಯಲ್ಲಾಪುರ ಮತ್ತು ಅಂಕೋಲಾದ ನೆರೆಪೀಡಿತ ಪ್ರದೇಶಗಳಿಗೆ ಭೇಟಿ ನೀಡಲಿದ್ದಾರೆ.
ಯಲ್ಲಾಪುರ ತಾಲೂಕಿನ ಕಳಚೆ, ಅರೆಬೈಲ್, ಗುಳ್ಳಾಪುರ ಹಾಗೂ ಅಂಕೋಲಾ ತಾಲೂಕಿನ ಬೆಳಸೆ, ಶಿರೂರು, ಮಂಜುಗುಣಿ ಪ್ರದೇಶಗಳು ಪ್ರವಾಹದಿಂದ ತತ್ತರಿಸಿಹೋಗಿದ್ದು, ಈ ಗ್ರಾಮಗಳಲ್ಲಿ ಮುಖ್ಯಮಂತ್ರಿ ಸಮೀಕ್ಷೆ ನಡೆಸಲಿದ್ದಾರೆ. ಕಾಳಜಿ ಕೇಂದ್ರಗಳಲ್ಲಿರುವ ಸಂತ್ರಸ್ತರಿಗೆ ಹಾಗೂ ಕೈಗೊಂಡಿರುವ ಕ್ರಮಗಳ ಪರಿಶೀಲನೆಯನ್ನು ಅವರು ನಡೆಸಲಿದ್ದಾರೆ.
ಮಧ್ಯಾಹ್ನ ಅಂಕೋಲಾದ ನಾಡವರ ಸಭಾಭವನದಲ್ಲಿ ಪರಿಹಾರ ಕಾರ್ಯಗಳ ಕುರಿತಂತೆ ಜಿಲ್ಲೆಯ ಶಾಸಕರು, ಸಂಸದರು ಮತ್ತು ಅಧಿಕಾರಿಗಳೊಂದಿಗೆ ಚರ್ಚಿಸಲಿದ್ದು, ಮೂರು ಗಂಟೆಗೆ ರಸ್ತೆ ಮಾರ್ಗದ ಮೂಲಕ ಅಂಕೋಲಾದಿಂದ ನಿರ್ಗಮಿಸಿ ಹುಬ್ಬಳ್ಳಿ ಕಡೆ ಪ್ರಯಾಣ ಮಾಡಲಿದ್ದಾರೆ.
ಪ್ರವಾಹದಿಂದ ಅಂದಾಜು ಹಾನಿ: ಉತ್ತರಕನ್ನಡ ಜಿಲ್ಲೆಯ 114 ಗ್ರಾಮಗಳು ಪ್ರವಾಹದಿಂದ ಬಾಧಿತವಾಗಿದ್ದು, 18,420ಕ್ಕೂ ಹೆಚ್ಚು ಜನ ಸಂತ್ರಸ್ತರಾಗಿದ್ದಾರೆ. ನೆರೆ ಪ್ರವಾಹದಿಂದ ಏಳು ಮಂದಿ ಮೃತಪಟ್ಟಿದ್ದು, ನಾಲ್ಕುನೂರಕ್ಕೂ ಹೆಚ್ಚು ಮನೆಗಳಿಗೆ ಹಾನಿಯಾಗಿದೆ. ಒಟ್ಟು 143 ಕಾಳಜಿ ಕೇಂದ್ರಗಳಲ್ಲಿ ಸಾವಿರಾರು ಸಂತ್ರಸ್ತರಿಗೆ ಆಶ್ರಯ ನೀಡಲಾಗಿದೆ. 595 ಹೆಚ್ಚು ಹೆಕ್ಟೆರ್ ಕೃಷಿ ಭೂಮಿ ಹಾಗೂ 418 ಹೆಚ್ಚು ಹೆಕ್ಟೆರ್ ತೋಟಗಾರಿಕೆ ಭೂಮಿ ನಾಶವಾಗಿದ್ದು 59 ಜಾನುವಾರುಗಳು ಮೃತಪಟ್ಟಿವೆ. ಪ್ರವಾಹದಿಂದಾಗಿ 226.5 ಕಿಲೋಮೀಟರ್ ರಸ್ತೆ ನಾಶವಾಗಿದ್ದು, 39 ಸೇತುವೆಗಳಿಗೆ ಹಾನಿಯಾಗಿದೆ. 18 ಶಾಲೆ, 1 ಪ್ರಾಥಮಿಕ ಆರೋಗ್ಯ ಕೇಂದ್ರ, 42 ಟ್ರಾನ್ಸಫಾರ್ಮರ್, 800 ವಿದ್ಯುತ್ ಕಂಬ ಪ್ರವಾಹದಿಂದ ಕೊಚ್ಚಿಹೋಗಿವೆ. ಸಮೀಕ್ಷಾ ಕಾರ್ಯ ಇನ್ನೂ ಮುಂದುವರಿದಿದೆ.