ನಾಳೆ ಮೀಟ್‌ ಆಗ್ತೇನೆ ಸರ್‌, ಆ ವಿಷ್ಯ ಮಾತನಾಡ್ವಾ ಎಂದಿದ್ರು... ವಿಧಿ ಇಷ್ಟೊಂದು ಕ್ರೂರನಾ? ಭಾವುಕರಾದ ಸಿಎಂ

bommai
Published on

ಬೆಂಗಳೂರು: ನಟ ಪುನೀತ್‌ ರಾಜ್‌ಕುಮಾರ್‌ ಅವರ ಸಾವಿನ ಸುದ್ದಿಯನ್ನು ಎಷ್ಟೋ ಮಂದಿಗೆ ಇನ್ನೂ ಅರಗಿಸಿಕೊಳ್ಳಲು ಸಾಧ್ಯವೇ ಆಗುತ್ತಿಲ್ಲ. ಸರ್ಕಾರದ ಬಹುತೇಕ ಜಾಹೀರಾತುಗಳಲ್ಲಿ ಕಾಣಿಸಿಕೊಳ್ಳುತ್ತಿದ್ದ ಪುನೀತ್‌ ಅವರು ಸರ್ಕಾರದ ಹಲವು ಕಾರ್ಯಕ್ರಮಗಳಲ್ಲಿ ಭಾಗಿಯಾಗುತ್ತಿದ್ದರು.

ಅದೇ ರೀತಿ ನವೆಂಬರ್ 1ರಂದು ಕನ್ನಡ ರಾಜ್ಯೋತ್ಸವದ ದಿನದಂದು ವೆಬ್‌ಸೈಟ್‌ ಒಂದರ ಬಿಡುಗಡೆಗೆ ಸಿದ್ಧತೆ ನಡೆಸಲಾಗಿದ್ದು, ಅದರ ಬಿಡುಗಡೆಗೆ ಪುನೀತ್‌ ಅವರನ್ನು ಕರೆಯಲು ಮುಖ್ಯಮಂತ್ರಿ ನೇತೃತ್ವದಲ್ಲಿ ಸಭೆಯಲ್ಲಿ ತೀರ್ಮಾನಿಸಲಾಗಿತ್ತು. ಅದರಂತೆ, ನಿನ್ನೆ (ಗುರುವಾರ) ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಪುನೀತ್‌ ಜತೆ ಮಾತನಾಡಿದ್ದಾರೆ.

ಈ ಬಗ್ಗೆ ಭಾವುಕರಾಗಿ ಮಾಹಿತಿ ನೀಡಿದ ಬೊಮ್ಮಾಯಿಯವರು, ‘ನಿನ್ನೆ ಫೋನ್ ಮಾಡಿ ಪುನೀತ್ ಅವರ ಬಳಿ ಮಾತನಾಡಿದ್ದೆ. ರಾಜ್ಯೋತ್ಸವದ ವೆಬ್‌ಸೈಟ್‌ ಬಿಡುಗಡೆಗೆ ಬರಬೇಕು ಎಂದು ಹೇಳಿದ್ದೆ. ಈ ವಿಷಯವಾಗಿ ನಾಳೆ ಮಾತನಾಡುವ ಸರ್‌, ಭೇಟಿ ಮಾಡುತ್ತೇನೆ’ ಎಂದಿದ್ದರು. ನಿಜವಾಗಿ ಅವರನ್ನು ಇಂದು ಭೇಟಿಯಾಗಬೇಕಿತ್ತು. ಆದರೆ ವಿಧಿ ಇಷ್ಟೊಂದು ಕ್ರೂರವಾಗತ್ತೆ ಎಂದು ಅಂದುಕೊಂಡಿರಲಿಲ್ಲ. ಅವರು ಇಲ್ಲ ಎಂದರೆ ನಂಬಲು ಆಗುತ್ತಿಲ್ಲ’ ಎಂದರು.

ಡಾ ರಾಜ್ ಕುಮಾರ್ ಅವರ ಕುಟುಂಬದ ಜತೆಗೆ ನನ್ನದು ಬಹಳ ಹಿಂದಿನ ಒಡನಾಟ. ಸರಳ, ಉತ್ತಮ ಮನುಷ್ಯರಾಗಿದ್ದ ಪುನೀತ್‌ ಅವರ ಸೇವೆ ಯುವ ಜನಕ್ಕೆ ಮಾದರಿ. ಅವರು ಇನ್ನೂ ಬಹಳ ಎತ್ತರಕ್ಕೆ ಹೋಗಬೇಕಿತ್ತು. ಆದರೆ ವಿಧಿಯಾಟವೇ ಬೇರೆಯಾಗಿಬಿಟ್ಟಿದೆ’ ಎಂದು ಮುಖ್ಯಮಂತ್ರಿ ಗದ್ಗದಿತರಾದರು. ಸರ್ಕಾರ ಅಂತಿಮ ದರ್ಶನಕ್ಕೆ, ಅಂತ್ಯಕ್ರಿಯೆಗೆ ಎಲ್ಲ ಸಿದ್ಧತೆ ಮಾಡುತ್ತಿದೆ. ಅವರ ಕುಟುಂಬದವರು ಹೇಳಿದ ರೀತಿಯಲ್ಲಿಯೇ ಅಂತ್ಯಕ್ರಿಯೆ ಮಾಡಲಾಗುವುದು ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net