ತ್ರಿವಳಿ ತಲಾಖ್​, ಲೈಂಗಿಕ ದೌರ್ಜನ್ಯದಂಥ ಐತಿಹಾಸಿಕ ತೀರ್ಪು ನೀಡಿದ ನ್ಯಾ.ಲಲಿತ್​ ಮುಂದಿನ ಸಿಜೆಐ?

justice
ನ್ಯಾಯಮೂರ್ತಿ ಯು.ಯು.ಲಲಿತ್​ ಹಾಗೂ ಮುಖ್ಯ ನ್ಯಾಯಮೂರ್ತಿ ಎನ್.ವಿ.ರಮಣ
Published on

ನವದೆಹಲಿ: ತ್ರಿವಳಿ ತಲಾಖ್​, ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯಗಳ ಕುರಿತಂತೆ ಮಹತ್ವದ ತೀರ್ಪು ನೀಡಿದ ಸುಪ್ರೀಂಕೋರ್ಟ್​ ನ್ಯಾಯಮೂರ್ತಿ ಉದಯ್ ಉಮೇಶ್ ಲಲಿತ್ (ಯು.ಯು.ಲಲಿತ್)​ ಅವರ ಹೆಸರನ್ನು ಸುಪ್ರೀಂಕೋರ್ಟ್​ ಮುಖ್ಯನ್ಯಾಯಮೂರ್ತಿ (ಸಿಜಿಐ) ಸ್ಥಾನಕ್ಕೆ ಶಿಫಾರಸು ಮಾಡಲಾಗಿದೆ.

ಹಾಲಿ ಮುಖ್ಯನ್ಯಾಯಮೂರ್ತಿ ಎನ್.ವಿ.ರಮಣ ಅವರು ಆಗಸ್ಟ್ 26ರಂದು ನಿವೃತ್ತಿ ಹೊಂದಲಿದ್ದಾರೆ. ಈ ಹಿನ್ನೆಲೆಯಲ್ಲಿ, ಆ ಸ್ಥಾನಕ್ಕೆ ನ್ಯಾಯಮೂರ್ತಿ ಲಲಿತ್​ ಅವರ ಹೆಸರನ್ನು ಶಿಫಾರಸು ಮಾಡಿ ನ್ಯಾಯಮೂರ್ತಿ ಎನ್‌.ವಿ.ರಮಣ ಅವರು ಕೇಂದ್ರ ಸರ್ಕಾರಕ್ಕೆ ಪತ್ರ ಬರೆದಿದ್ದಾರೆ. ತಮ್ಮ ಉತ್ತರಾಧಿಕಾರಿಯನ್ನು ಶಿಫಾರಸು ಮಾಡುವಂತೆ ಕಾನೂನು ಸಚಿವಾಲಯ ಕೋರಿದ ಹಿನ್ನೆಲೆಯಲ್ಲಿ ನ್ಯಾಯಮೂರ್ತಿ ರಮಣ್​ ಅವರು ಈ ಶಿಫಾರಸು ಮಾಡಿದ್ದಾರೆ.

ಒಂದು ವೇಳೆ ಇದು ಅಂತಿಮಗೊಂಡರೆ ನ್ಯಾಯಮೂರ್ತಿ ಲಲಿತ್​ ಅವರು ಸುಪ್ರೀಂಕೋರ್ಟ್​ನ 49ನೇ ಮುಖ್ಯನ್ಯಾಯಮೂರ್ತಿ ಆಗಲಿದ್ದಾರೆ. ನ್ಯಾಯಮೂರ್ತಿ ಲಲಿತ್​ ಅವರು ಸುಪ್ರೀಂಕೋರ್ಟ್​ ನ್ಯಾಯಮೂರ್ತಿಯಾಗುವ ಮೊದಲು ಸುಪ್ರೀಂ ಕೋರ್ಟ್‌ನಲ್ಲಿ ಹಿರಿಯ ವಕೀಲರಾಗಿದ್ದರು. ವಕೀಲಿ ವೃತ್ತಿಯಲ್ಲಿ ಇರುವವರು ನೇರವಾಗಿ ಸುಪ್ರೀಂಕೋರ್ಟ್​ ನ್ಯಾಯಮೂರ್ತಿಯಾಗಿ ನೇಮಕಗೊಂಡು, ಈಕೆ ನೇಮಕಗೊಂಡ 6ನೇ ಹಿರಿಯ ವಕೀಲರು ಎನಿಸಿಕೊಂಡಿದ್ದಾರೆ.

ಅಂದಹಾಗೆ ನ್ಯಾಯಮೂರ್ತಿಗಳಾಗಿ ಲಲಿತ್​ ಅವರು ಕೆಲವು ಐತಿಹಾಸಿಕ ತೀರ್ಪುಗಳನ್ನು ನೀಡಿದ್ದಾರೆ. ಭಾರಿ ವಿವಾದವನ್ನೂ ಸೃಷ್ಟಿಸಿದ್ದ ತ್ರಿವಳಿ ತಲಾಖ್​ ತೀರ್ಪು ನೀಡಿದ್ದೂ ಇವರ ನೇತೃತ್ವದ ಪೀಠವೇ. ಬಟ್ಟೆ ಧರಿಸಿದ್ದಾಗ ಖಾಸಗಿ ಅಂಗ ಮುಟ್ಟಿದರೆ ಲೈಂಗಿಕ ದೌರ್ಜನ್ಯ ಅಲ್ಲ ಎಂದು ಬಾಂಬೆ ಹೈಕೋರ್ಟ್​ ನೀಡಿದ್ದ ಭಾರಿ ಟೀಕೆಗೆ ಗುರಿಯಾಗಿದ್ದ ತೀರ್ಪನ್ನು ರದ್ದು ಮಾಡಿದ್ದು ಕೂಡ ನ್ಯಾ.ಲಲಿತ್​ ಅವರ ನೇತೃತ್ವದ ಪೀಠ. ಹೈಕೋರ್ಟ್​ ನೀಡಿರುವ ತೀರ್ಪಿನಂತೆ ಹೋದರೆ ಲೈಂಗಿಕ ಅಪರಾಧಗಳಿಂದ ಮಕ್ಕಳನ್ನು ರಕ್ಷಿಸುವ ಬದಲು ಅವರನ್ನೇ ಶಿಕ್ಷಿಸಿದಂತಾಗುತ್ತದೆ ಎಂದಿದ್ದ ನ್ಯಾ.ಲಲಿತ್​ ನೇತೃತ್ವದ ಪೀಠ, ಲೈಂಗಿಕ ಉದ್ದೇಶದಿಂದ ಸ್ಪರ್ಶಿಸುವ ಯಾವುದೇ ಸ್ಪರ್ಶ ಕಾನೂನು ಉಲ್ಲಂಘನೆಯಾಗಿದೆ ಎಂದು ಹೇಳಿತ್ತು. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net