17 ವರ್ಷ ತುಂಬಿದರೆ ಸಾಕು... ಮತದಾರರ ಪಟ್ಟಿಯಲ್ಲಿ ಹೆಸರು ನೋಂದಣಿಗೆ ಅವಕಾಶ- ಕೇಂದ್ರದಿಂದ ಹೊಸ ರೂಲ್ಸ್​

vote
Published on

ನವದೆಹಲಿ: ಮುಂದಿನ ವರ್ಷ 18 ವಯಸ್ಸು ನಿಮಗೆ ಆಗುವುದಾದರೆ, ನೀವು ಈಗಲೇ ಮತದಾರರ ಪಟ್ಟಿಯಲ್ಲಿ ಹೆಸರನ್ನು ನೋಂದಾಯಿಸಲು ಅರ್ಜಿ ಸಲ್ಲಿಸಬಹುದು. ಹೀಗೊಂದು ಹೊಸ ಪ್ರಕಟಣೆಯನ್ನು ಚುನಾವಣಾ ಆಯೋಗ ಹೊರಡಿಸಿದೆ. ಇದರ ಅರ್ಥ 17 ವರ್ಷಕ್ಕಿಂತ ಮೇಲ್ಪಟ್ಟರು ಈಗ ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರನ್ನು ನೋಂದಾಯಿಸಲು ಮುಂಚಿತವಾಗಿ ಅರ್ಜಿ ಸಲ್ಲಿಸಬಹುದು ಎನ್ನುವುದಾಗಿದೆ.

ಸದ್ಯದ ಪರಿಸ್ಥಿತಿಯಲ್ಲಿ ಚುನಾವಣಾ ಪಟ್ಟಿಯನ್ನು ಜನವರಿ 1ರಂದು ಮಾತ್ರ ನವೀಕರಿಸಲಾಗುತ್ತಿದೆ. ಆದ್ದರಿಂದ 18 ವರ್ಷ ಪೂರೈಸಿದ ಯುವ ಜನರು ನೋಂದಣಿಗಾಗಿ ವರ್ಷ ವರ್ಷ ಕಾಯಬೇಕಿತ್ತು. ಒಂದು ವೇಳೆ ಈ ಮಧ್ಯದ ಅವಧಿಯಲ್ಲಿ ಚುನಾವಣೆಗಳು ನಡೆದರೆ 18 ವರ್ಷ ತುಂಬಿದರೂ ಮತ ಚಲಾಯಿಸುವ ಅವಕಾಶ ಸಿಗುತ್ತಿಲ್ಲ. ಆದ್ದರಿಂದ ಈಗ ಈ ಹೊಸ ನಿಯಮ ಜಾರಿಗೆ ತರಲಾಗಿದೆ.

ಈ ಮೊದಲು ಪ್ರತಿವರ್ಷದ ಜನವರಿ 1ರಂದು ಮಾತ್ರ ಚುನಾವಣಾ ಪಟ್ಟಿಯನ್ನು ನವೀಕರಿಸಲಾಗುತ್ತಿತ್ತು. ಇನ್ನು ಮುಂದೆ, ಜ.1ರ ಜತೆಗೆ ಏಪ್ರಿಲ್ 1, ಜುಲೈ 1 ಮತ್ತು ಅಕ್ಟೋಬರ್ 1 ಹೀಗೆ ನಾಲ್ಕು ಬಾರಿ ನವೀಕರಿಸಲಾಗುತ್ತದೆ. ಆದ್ದರಿಂದ ಅರ್ಹ ಯುವಕ- ಯುವತಿಯರಿಗೆ ಅದೇ ಸಾಲಿನಲ್ಲಿ ಬರುವ ಚುನಾವಣೆಯಲ್ಲಿ ಮತ ಚಲಾಯಿಸಲು ಅವಕಾಶ ಸಿಗುತ್ತದೆ.

ಪ್ರಾಥಮಿಕ ಪ್ರಕ್ರಿಯೆ ಬಳಿಕ ಅರ್ಜಿದಾರರು ಎಲೆಕ್ಟೊರಲ್ ಫೋಟೋ ಐಡೆಂಟಿಟಿ ಕಾರ್ಡ್ (ಇಪಿಐಸಿ) ಅಥವಾ ಮತದಾರರ ಗುರುತಿನ ಚೀಟಿ ಪಡೆದುಕೊಳ್ಳುತ್ತಾರೆ.

ಚುನಾವಣಾ ಆಯೋಗವು 18-19ರ ವಯಸ್ಸಿನ 1,736,181 ಹೊಸ ಮತದಾರರನ್ನು ನೋಂದಣಿ ಮಾಡಿಕೊಂಡಿದೆ. ಕಳೆದ ವರ್ಷ 14,526,678 ಹೊಸ ಮತದಾರರನ್ನು ಪಟ್ಟಿಗೆ ಸೇರಿಸಲಾಗಿತ್ತು. ಇದಲ್ಲದೆ ಆಧಾರ್ ಕಾರ್ಡ್ ಮತ್ತು ಮತದಾರರ ಗುರುತಿನ ನೋಂದಣಿಯನ್ನು ಜೋಡಿಸುವ ಪ್ರಕ್ರಿಯೆಯನ್ನು ಕೂಡ ಚುನಾವಣಾ ಆಯೋಗ ಆರಂಭಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net