ಗರ್ಲ್‌ಫ್ರೆಂಡ್ ಜತೆ ಎಸ್ಕೇಪ್‌ ಆಗಿರೋ ‘ಖದೀಮ’ ಚೋಕ್ಸಿಯನ್ನು ಕರೆತರಲು ಆಗ್ತಿರೋ ಖರ್ಚು ಕೇಳಿದ್ರೆ ಶಾಕ್‌ ಆಗ್ತೀರಾ!

choksi
Published on

ನವದೆಹಲಿ: ಪಂಜಾಬ್‌ ನ್ಯಾಷನ್‌ ಬ್ಯಾಂಕ್‌ಗೆ ಹದಿಮೂರು ಸಾವಿರ ಕೋಟಿ ರೂಪಾಯಿ ವಂಚನೆ ಪ್ರಕರಣದಲ್ಲಿ ತಲೆಮರೆಸಿಕೊಂಡು ಸಿಕ್ಕಿಬಿದ್ದಿರುವ ವಜ್ರ ವ್ಯಾಪಾರಿ ಮೆಹುಲ್ ಚೋಕ್ಸಿ ಅವರನ್ನು ಭಾರತಕ್ಕೆ ಕರೆತರಲು ಸಕಲ ಸಿದ್ಧತೆ ನಡೆಸಲಾಗಿದೆ. ಇವರು ಇದೇ ಬ್ಯಾಂಕ್‌ಗೆ ಬಹುಕೋಟಿ ವಂಚನೆ ಮಾಡಿರುವ ಉದ್ಯಮಿ ನೀರವ್‌ ಮೋದಿ ಮಾವ.

ಇಷ್ಟು ವರ್ಷ ಬೇಕಾಬಿಟ್ಟೆಯಾಗಿ ಮೋಸಮಾಡುತ್ತ ಬಂದಿರುವ ನೀರವ್‌ ಮೋದಿ ಹಾಗೂ ಈ ಚೋಕ್ಸಿ ಬಂಡವಾಳ ಇದೀಗ ಬೆಳಕಿಗೆ ಬಂದಿದ್ದು, ಇಬ್ಬರೂ ತಲೆಮರೆಸಿಕೊಂಡು ಸಿಕ್ಕಿಬಿದ್ದವರು.

ಗೀತಾಂಜಲಿ ವಜ್ರದ ವ್ಯಾಪಾರ ಸಂಸ್ಥೆಯ ಮುಖ್ಯಸ್ಥರಾಗಿರುವ ಚೋಕ್ಸಿ (61) ಅವರನ್ನು ದೆಹಲಿಯಿಂದ ‘ಬೊಂಬಾರ್ಡಿಯರ್ ಗ್ಲೋಬಲ್- 5000’ ಕಂಪೆನಿಯ ಜೆಟ್ ವಿಮಾನ ಕಳುಹಿಸಲಾಗಿದೆ. ಚೋಕ್ಸಿ ತನ್ನ ಸ್ನೇಹಿತೆಯ ಜತೆ ಆ್ಯಂಟಿಗುವಾದಲ್ಲಿ ಸಿಕ್ಕಿಬಿದ್ದಿದ್ದಾರೆ. ಡೊಮಿನಿಕಾ ದ್ವೀಪಕ್ಕೆ ಗರ್ಲ್‌ಫ್ರೆಂಡ್‌ ಜತೆ ರೊಮಾನ್ಸ್ ಮಾಡುವಾಗ ಸಿಕ್ಕಿಬಿದ್ದಿದ್ದಾರೆ. ಅಲ್ಲಿಯ ಪ್ರಧಾನಿ ಭಾರತಕ್ಕೆ ಅವರನ್ನು ಹಸ್ತಾಂತರಿಸುವುದಾಗಿ ಹೇಳಿರುವ ಕಾರಣ, ಜೆಟ್‌ ಕಳುಹಿಸಲಾಗಿದೆ.

ಟ್ರಾವೆಲ್ ಯಾತ್ರಾ ವೆಬ್​ಸೈಟ್ ನೀಡಿರುವ ಮಾಹಿತಿ ಪ್ರಕಾರ, ದೆಹಲಿಯಿಂದ ಆ್ಯಂಟಿಗುವಾಕ್ಕೆ ಹೋಗಿ ಬರಲು 52 ಗಂಟೆ 27 ನಿಮಿಷಗಳು ತಗಲುತ್ತವೆ. ವಿಚಿತ್ರ ಎಂದರೆ ಈಗ ಕಳುಹಿಸಿರುವ ಜೆಟ್‌ಗೆ 1 ಗಂಟೆಗೆ 8.46 ಲಕ್ಷ ರೂಪಾಯಿ ವೆಚ್ಚವಾಗುತ್ತದೆ. ದೆಹಲಿಯಿಂದ ಆ್ಯಂಟಿಗುವಾಕ್ಕೆ ತೆರಳುವುದಕ್ಕೆ ಈ ಜೆಟ್​ಗೆ 1.35 ಕೋಟಿಯಿಂದ 1.43 ಕೋಟಿ ರೂ. ಖರ್ಚು ಮಾಡಲಾಗಿದೆ ಎಂದು ಮೂಲಗಳು ಹೇಳಿವೆ. ಇವನ್ನು ಒಟ್ಟಾರೆಯಾಗಿ ಲೆಕ್ಕಾಚಾರ ಹಾಕಿದರೆ, ಚೋಕ್ಸಿಯನ್ನು ಭಾರತಕ್ಕೆ ವಾಪಾಸ್ ಕರೆತರಲು 2.86 ಕೋಟಿ ರೂಪಾಯಿಗಳಷ್ಟು ಖರ್ಚಾಗಲಿದೆ, ಇದರ ಜತೆಗೆ ಜಿಎಸ್‌ಟಿ ಪ್ರತ್ಯೇಕ!

ಇವಿಷ್ಟೇ ಅಲ್ಲ. ಜೆಟ್‌ ಕಳುಹಿಸಿರುವ ಏಜೆನ್ಸಿಗೆ ಬಾಡಿಗೆ ರೂಪದಲ್ಲಿ ಎರಡೂ ದೇಶಗಳು ರೂಪಾಯಿ ಲೆಕ್ಕದಲ್ಲಿ ಹೇಳುವುದಾದರೆ ಸುಮಾರು 5.11 ಲಕ್ಷ ರೂಪಾಯಿಗಳನ್ನು ನೀಡಬೇಕು.

ಡೊಮಿನಕಾ ದ್ವೀಪ ಅತ್ಯಂತ ಸುಂದರವಾಗಿದ್ದು, ಅಲ್ಲಿ ಸಮಯ ಕಳೆಯಲು ಭಾರತದಿಂದ ಚೋಕ್ಸಿ ಗರ್ಲ್‌ಫ್ರೆಂಡ್‌ ಜತೆ ತಲೆಮರೆಸಿಕೊಂಡಿದ್ದರು. ಈ ಹಣವನ್ನು ನಂತರ ಚೋಕ್ಸಿಯಿಂದಲೇ ವಸೂಲು ಮಾಡಲಾಗುವುದು ಎಂದು ಮೂಲಗಳು ಹೇಳಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net