

ಲಡಾಖ್: ಪೂರ್ವ ಲಡಾಖ್ನಲ್ಲಿ ಕಾಲು ಕೆರೆದು ಭಾರತದೊಂದಿಗೆ ಜಗಳಕ್ಕೆ ಬಂದಿರುವ ಚೀನಾಕ್ಕೆ ಬುದ್ಧಿ ಕಲಿಸಲು ಇದಾಗಲೇ ಭಾರತೀಯ ಸೇನೆ ಸಕಲ ಸನ್ನದ್ಧವಾಗಿದೆ.
ಗಡಿ ಘರ್ಷಣೆ ಬಳಿಕ ತನ್ನ ಸಮರ ಸಿದ್ಧತೆಯನ್ನು ಹೆಚ್ಚಿಸಿರುವ ಭಾರತೀಯ ವಾಯುಸೇನೆ, ಲಡಾಖ್ ಗಡಿಯಲ್ಲಿ ರಾತ್ರಿ ಕಾರ್ಯಾಚರಣೆಗೂ ಸಜ್ಜಾಗಿದೆ. ಇದೀಗ ಸೇನೆಗೆ ಚಿನೂಕ್ ಹೆಲಿಕಾಪ್ಟರ್ ಸೇರ್ಪಡೆಗೊಂಡಿದ್ದು, ಇದು ಗಡಿಯಲ್ಲಿ ನಿನ್ನೆ ರಾತ್ರಿ ತಾಲೀಮು ನಡೆಸಿದೆ.
ಅತ್ಯಾಧುನಿಕ ಹೆಲಿಕಾಪ್ಟರ್ ಇದಾಗಿದೆ. ಲೇಹ್-ಲಡಾಖ್‌ನ ವಾಸ್ತವ ನಿಯಂತ್ರಣ ರೇಖೆ (ಎಲ್‌ಎಸಿ) ಬಳಿ ಚಿನೂಕ್ ಹೆಲಿಕಾಪ್ಟರ್ ರಾತ್ರಿ ಕಾರ್ಯಾಚರಣೆಯ ವೈಮಾನಿಕ ಪ್ರದರ್ಶನವನ್ನು ಪೂರ್ಣಗೊಳಿಸಿದೆ ಎಂದು ಭಾರತೀಯ ವಾಯುಸೇನೆ ಸ್ಪಷ್ಟಪಡಿಸಿದೆ.
ಗಡಿಯಲ್ಲಿ ಪರಿಸ್ಥಿತಿ ಬಿಗಡಾಯಿಸಿರುವುದರಿಂದ ಭಾರತೀಯ ಸೇನೆ ಚಿನೂಕ್ ಹೆಲಿಕಾಪ್ಟರ್ ಸೇರಿದಂತೆ ಮಿಗ್-29 ಯುದ್ಧ ವಿಮಾನ, ಇಲ್ಯುಶಿನ್-76 ಮತ್ತು ಆಂಟೋನಿಯೊ-32 ಸಾರಿಗೆ ವಿಮಾನಗಳೂ ಕೂಡ ಈ ಕಾರ್ಯಚರಣೆಯಲ್ಲಿ ಭಾಗವಹಿಸಿದ್ದವು ಎಂದು ವಾಯುಸೇನೆ ಖಚಿತಪಡಿಸಿದೆ.
ನಿನ್ನೆಯಷ್ಟೇ ಭಾರತೀಯ ಸೇನೆಗೆ ಅಗತ್ಯ ಸಾಮಾನು ಸರಂಜಾಮುಗಳನ್ನು ಹೊತ್ತ, ಭಾರತೀಯ ವಾಯುಸೇನೆಯ ಸಿ-17 ಗ್ಲೋಬ್‌ಮಾಸ್ಟರ್ ಕಾರ್ಗೋ ವಿಮಾನ ಲಡಾಖ್‌ನ ಲೇಹ್ ವಾಯುನೆಲೆಗೆ ಬಂದಿಳಿದಿದೆ.