

ಪ್ಯಾರಿಸ್: ಬೆಕ್ಕು ಹಾಗೂ ಹುಲಿ ಮರಿಗಳು ನೋಡಲು ಒಂದೇ ತೆರನಾಗಿರುತ್ತವೆ. ಹಾಗೆಂದು ಬೆಕ್ಕನ್ನು ಸಾಕುವ ಎಂದು ಅದನ್ನು ಖರೀದಿಸಿದಾಗ, ಅದು ಹುಲಿಮರಿಯೆಂದು ಗೊತ್ತಾದರೆ ಹೇಗಿರುತ್ತೆ?
ಅಂಥದ್ದೇ ಒಂದು ಘಟನೆ ಪ್ಯಾರೀಸ್ನಲ್ಲಿ ನಡೆದಿದೆ. ಇಲ್ಲಿಯ ನಾರ್ಮಂಡಿಯ ಬಂದರು ನಗರವಾದ ಲೆ ಹ್ಯಾವ್ರೆ ದಂಪತಿ ಆನ್ಲೈನ್ನಲ್ಲಿ ಬೆಕ್ಕಿನ ಜಾಹೀರಾತು ನೋಡಿದ್ದಾರೆ. ಸವನ್ನಾ ಎಂಬ ತಳಿಯ ವಿಶೇಷ ಬೆಕ್ಕು ಇದು.
ಈ ಬೆಕ್ಕಿನ ಮುದ್ದುಮುದ್ದು ಮುಖ ನೋಡಿದ ದಂಪತಿ ಬೆಕ್ಕನ್ನು ಖರೀದಿಸಲು ಮುಂದಾಗಿದ್ದಾರೆ. ಅದರ ಆಫ್ರಿಕನ್ ತಳಿಯ ಬೆಕ್ಕು ಮತ್ತು ಸಾಮಾನ್ಯ ಬೆಕ್ಕುಗಳನ್ನು ಸೇರಿಸಿ ಪಡೆಯುವ ಬೆಕ್ಕು ಸವನ್ನಾ ತಳಿ. ಆದ್ದರಿಂದ ಇದಕ್ಕೆ ವಿಶೇಷ ಬೇಡಿಕೆ ಇದೆ. ನೋಡಲು ಕೂಡ ಸಾಮಾನ್ಯ ಬೆಕ್ಕುಗಳಿಗಿಂತ ಮುದ್ದುಮುದ್ದಾಗಿರುತ್ತದೆ, ಜತೆಗೆ ಅಷ್ಟೇ ಚುರುಕು ಕೂಡ. ಇದರ ವಿಶೇಷತೆಗೆ ಬೆಕ್ಕಬೆರಗಾದರು ಈ ಸಿರಿವಂತ ದಂಪತಿ.
ಆನ್ಲೈನ್ನಲ್ಲಿ ಜಾಹೀರಾತನ್ನು ನೋಡಿದ ನಂತರ ಸವನ್ನಾ ಬೆಕ್ಕನ್ನು ಪಡೆಯಲು ಬಯಸಿದ್ದರು. ನಂತರ ಈ ತಳಿಯ ಬೆಕ್ಕಿನ ಹುಡುಕಾಟ ನಡೆಸಿದಾಗ ಕೊನೆಗೂ ಅವರಿಗೆ ಇದು ಸಿಕ್ಕಿದೆ. ಇದರ ಬೆಲೆ 6 ಸಾವಿರ ಯೂರೋ. ಅಂದರೆ ಸುಮಾರು 5.17 ಲಕ್ಷ ರೂಪಾಯಿ!
ಇಷ್ಟೊಂದು ದುಬಾರಿ ಹಣವನ್ನು ಕೊಟ್ಟು, ಬೆಕ್ಕನ್ನು ಖರೀದಿಸಿದ ದಂಪತಿ ಅದನ್ನು ಚೆನ್ನಾಗಿ ಸಾಕುತ್ತಿದ್ದರು ಕೂಡ. ಆದರೆ ಒಂದು ವಾರ ಕಳೆಯುವಷ್ಟರಲ್ಲಿಯೇ ಇದರ ವರ್ತನೆ ನೋಡಿ ದಂಪತಿಗೆ ಏನೋ ಸಂದೇಹ ಬಂದಿದೆ. ಇದು ಬೆಕ್ಕಿನ ರೀತಿ ಇಲ್ಲ ಬದಲಿಗೆ ಹುಲಿಯ ರೀತಿಯಲ್ಲಿ ವರ್ತಿಸುತ್ತಿದೆ ಎಂದು ಕಂಡುಬಂದಿದೆ.
ಆದರೆ ಮೊದಮೊದಲು ಇದು ವಿಶೇಷ ತಳಿಯ ಬೆಕ್ಕಾಗಿರುವ ಕಾರಣ, ಅದರಲ್ಲಿ ಈ ರೀತಿಯ ವರ್ತನೆ ಇರಬಹುದು ಎಂದುಕೊಂಡಿದ್ದಾರೆ. ಆದರೆ ಅವರ ಸಂದೇಹ ಬಲವಾಗುತ್ತಾ ಹೋಗಿದೆ. ನಂತರ ತಮ್ಮ ಮನೆಯಲ್ಲಿರುವ ಪ್ರಾಣಿಯ ವರ್ತನೆ ಕುರಿತು ಜಾಲತಾಣಗಳಲ್ಲಿ ಹುಡುಕಾಡಿದಾಗ ಅವರಿಗೆ ಇದು ಸುಮಾತ್ರನ್ ತಳಿಯ ಹುಲಿಮರಿ ಎಂದು ತಿಳಿದಿದೆ.
ದಿಗಿಲುಗೊಂಡ ದಂಪತಿ, ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಒಂದೆಡೆ ತಮ್ಮ ಮನೆಯಲ್ಲಿ ಇರುವುದು ಹುಲಿಮರಿ ಎನ್ನುವ ಭಯವಾದರೆ, ಇನ್ನೊಂದೆಡೆ, ಇದನ್ನು ಮನೆಯಲ್ಲಿ ಸಾಕುವುದು ಭಾರಿ ಅಪರಾಧ. ಆದ್ದರಿಂದ ಹೆದರಿದ ದಂಪತಿ ಕೂಡಲೇ ಪೊಲೀಸರಲ್ಲಿ ದೂರು ದಾಖಲಿಸಿದ್ದಾರೆ.
ಇದರ ಬೆನ್ನಟ್ಟಿ ಹೋದ ಪೊಲೀಸರಿಗೆ ಈ ಹುಲಿಮರಿಯನ್ನು ಕಾನೂನುಬಾಹಿರವಾಗಿ ಮಾರಾಟ ಮಾಡುವ ದೊಡ್ಡ ಜಾಲವೇ ಪತ್ತೆಯಾಯಿತು. ನಂತರ ಈ ಕಳ್ಳಸಾಗಾಣಿಕೆಗೆ ಸಂಬಂಧಿಸಿದಂತೆ 9 ಮಂದಿಯನ್ನು ಬಂಧಿಸಿರುವ ಪೊಲೀಸರು ತನಿಖೆ ಕೈಗೊಂಡಿದ್ದಾರೆ.
ಒಟ್ಟಿನಲ್ಲಿ ಬೆಕ್ಕಿನ ಮರಿಯೆಂದು ಹುಲಿಮರಿ ತಂದ ದಂಪತಿ ಮಾತ್ರ ಇನ್ನೆಂದೂ ಬೆಕ್ಕಿನ ಗೋಜಿಗೆ ಹೋಗುವಂತೆ ತೋರುತ್ತಿಲ್ಲ.