

ಬೀಜಿಂಗ್: ದಶಕಗಳ ಕಾಲ ಜಾರಿಯಲ್ಲಿದ್ದ ಒಂದು-ಮಗು ನೀತಿಯಿಂದ ಚೀನಾದ ಜನಸಂಖ್ಯೆಯ ಮೂರನೇ ಒಂದು ಭಾಗದಷ್ಟು ಅಂದರೆ, ಶೇ.33ರಷ್ಟು ಜನಸಂಖ್ಯೆ ಕಡಿಮೆಯಾಗಿದೆ. ಜನಸಂಖ್ಯೆ ತೀರಾ ಕಡಿಮೆಯಾದರೆ ದೇಶದ ಆರ್ಥಿಕತೆ ಕುಸಿದು ಹೋಗುತ್ತಿರುವ ಬಗ್ಗೆ ಭಾರಿ ಆತಂಕ ಸೃಷ್ಟಿಸಿದ್ದ ಚೀನಾ 2016ರಲ್ಲಿ ನಿಯಮಗಳನ್ನು ಬದಲಾಯಿಸಿ ಒಂದು ಮಗುವಿನಿಂದ ಎರಡು ಮಗುವಿಗೆ ನೀತಿ ಬದಲಿಸಿತು.
ಆದರೆ ಕಳೆದ ವರ್ಷ ಅಂದರೆ 2020ರಲ್ಲಿ ಬಿಡುಗಡೆಯಾದ ಚೀನಾದ ಸಾರ್ವಜನಿಕ ಭದ್ರತಾ ಸಚಿವಾಲಯದ ಅಂಕಿ ಅಂಶಗಳ ಪ್ರಕಾರ 2020ರಲ್ಲಿ ನೋಂದಾಯಿತ ಜನನಗಳ ಸಂಖ್ಯೆ 10.04 ದಶಲಕ್ಷಕ್ಕೆ ಇಳಿದಿದೆ. ಇದು ಹಿಂದಿನ ವರ್ಷಕ್ಕಿಂತ 30 ಪ್ರತಿಶತಕ್ಕಿಂತಲೂ ಕಡಿಮೆಯಾಗಿದೆ. ಸತತ 4 ವರ್ಷಗಳಿಂದಲೂ ಮಕ್ಕಳ ಜನನ ಪ್ರಮಾಣ ಕಡಿಮೆಯಾಗಿದೆ ಎಂದು ಅದರಲ್ಲಿ ಉಲ್ಲೇಖವಾಗಿದೆ.
ಅಧಿಕೃತ ಅಂಕಿಅಂಶಗಳ ಪ್ರಕಾರ ಲಿಂಗ ಸಮತೋಲನದಲ್ಲೂ ವ್ಯತ್ಯಾಸವಾಗಿದ್ದು, ಶೇಕಡಾ 52.7 ರಷ್ಟು ಬಾಲಕರು ಇದ್ದರೆ, ಶೇ. 47.3 ಪ್ರತಿಶತ ಬಾಲಕಿಯರು ಇದ್ದಾರೆ ಎಂದೂ ವರದಿ ತಿಳಿಸಿದೆ. ಇದರಿಂದ ಚೀನಾ ಕಂಗೆಟ್ಟು ಹೋಗಿದೆ. ಈ ಪರಿಯಲ್ಲಿ ಜನಸಂಖ್ಯೆ ಕುಸಿದರೆ ತಮ್ಮ ದೇಶದ ಪಾಡೇನು? ಇರುವವರೆಲ್ಲರೂ ವಯಸ್ಸಾಗಿಬಿಟ್ಟರೆ ಉದ್ಯೋಗ, ಆರ್ಥಿಕತೆಯಲ್ಲಿ ಸಮಸ್ಯೆ ಉಂಟಾಗುತ್ತದೆ ಎಂದು ಈ ಕಮ್ಯುನಿಸ್ಟ್ ಸರ್ಕಾರ ಚಿಂತೆ ಮಾಡುತ್ತಿದೆ.
ಮೊದಲ ಬಾರಿಗೆ ಮದುವೆಯಾಗುವ ಚೀನಾದ ಜನರ ಸಂಖ್ಯೆ 2013ರಲ್ಲಿ 23.8 ದಶಲಕ್ಷ ಇದ್ದರೆ 2019ರಲ್ಲಿ ಅದರ ಪ್ರಮಾಣದ 13.9 ದಶಲಕ್ಷಕ್ಕೆ ಇಳಿದಿದೆ. ಹೀಗಾದರೆ ಜನಸಂಖ್ಯೆಯ ಗತಿಯೇನು ಎಂದುಕೊಂಡಿರುವ ಚೀನಾ ಸರ್ಕಾರ ಹೊಸ ಪ್ಲ್ಯಾನ್ ಶುರು ಮಾಡಿದೆ.
ಹೀಗೆಯೇ ಎಲ್ಲರೂ ಒಂದು ಮಕ್ಕಳನ್ನು ಪಡೆಯುತ್ತಾ ಹೋದರೆ ವಿವಾಹದ ದರದಲ್ಲಿ ತೀವ್ರ ಕುಸಿತದಿಂದಾಗಿ ಚೀನಾದ ಕಮ್ಯುನಿಸ್ಟ್ ಪಕ್ಷದ ಆಡಳಿತಕ್ಕೆ ಅಪಾಯವನ್ನುಂಟುಮಾಡಬಹುದು ಎಂದು ಹೇಳಿರುವ ಸರ್ಕಾರ ಹೆಚ್ಚೆಚ್ಚು ಯುವಕರು ಶೀಘ್ರದಲ್ಲಿ ಮದುವೆಯಾಗಲು ಎಲ್ಲಾ ರೀತಿಯ ಸಹಾಯವನ್ನು ಮಾಡುತ್ತಿದೆ. ಮಾತ್ರವಲ್ಲದೇ ಮದುವೆಯಾದ ದಂಪತಿ ಸದಾ ಒಟ್ಟಿಗೆ ಇರಿಸಲು ಬೇಕಾಗುವ ಎಲ್ಲಾ ಅನುಕೂಲಗಳನ್ನು ಸರ್ಕಾರದಿಂದಲೇ ಮಾಡಲಾಗುತ್ತಿದೆ.
ಇದಕ್ಕಾಗಿ ಸಿ.ಸಿ.ಪ ಯ ಯುವ ಶಾಖೆಯಾದ ಕಮ್ಯುನಿಸ್ಟ್ ಯೂತ್ ಲೀಗ್, ಮ್ಯಾಚ್‌ಮೇಕಿಂಗ್ ಕಾರ್ಯವನ್ನು ಕೈಗೆತ್ತಿಕೊಂಡಿದೆ. ಭಾವಿ ಪತಿ- ಪತ್ನಿಗಾಗಿ ಯುವಕರು, ಅವರ ಪಾಲಕರು ಅಲೆದಾಡುವ ಚಿಂತೆಯೇ ಇಲ್ಲ. ಈ ಸಂಘಟನೆಗಳೇ ಇದೀಗ ಈ ಕಾರ್ಯವನ್ನು ವಹಿಸಿಕೊಂಡಿವೆ. ಮ್ಯಾಚ್‌ಮೇಕಿಂಗ್ ಮಾಡಿ ಬೇಗ ಅವರ ಮದುವೆ ಮಾಡಿಸುವುದೂ ಅಲ್ಲದೇ, ಒಟ್ಟಿಗೆ ಇರುವಂತೆ ಮಾಡುತ್ತಿದೆ.