ಮುಸ್ಲಿಂ ಹೆಣ್ಣುಮಕ್ಕಳಿಗೆ 18 ವರ್ಷ ಆಗದಿದ್ದರೂ ಪ್ರೌಢಾವಸ್ಥೆಗೆ ಬಂದರೆ ಮದುವೆಗೆ ಸ್ವತಂತ್ರರು; ಹೈಕೋರ್ಟ್​

marraige
Published on

ಚಂಡಿಗಢ: ಮದುವೆ ಮಾಡಲು ಹೆಣ್ಣುಮಕ್ಕಳಿಗೆ 18 ವರ್ಷ ವಯಸ್ಸಾಗಬೇಕು ಎನ್ನುವುದು ಹಿಂದೂ ಕಾನೂನು. 18 ವರ್ಷ ವಯಸ್ಸಾದ ಹಿಂದೂ ಹೆಣ್ಣುಮಕ್ಕಳು ತಮ್ಮ ಮದುವೆಗೆ ಸಂಗಾತಿಯನ್ನು ಆಯ್ಕೆ ಮಾಡಿಕೊಳ್ಳುವ ಅಧಿಕಾರವನ್ನು ಕಾನೂನು ನೀಡಿದೆ. ಆದರೆ ಮುಸ್ಲಿಂ ಕಾನೂನಿನ ಅನ್ವಯ ಹೆಣ್ಣುಮಕ್ಕಳು ಪ್ರೌಢಾವಸ್ಥೆ ತಲುಪಿದರೆ ಸಾಕು, ಅವರು ಯಾರನ್ನು ಬೇಕಾದರೂ ಮದುವೆಯಾಗಬಹುದು.

ಈ ಬಗ್ಗೆಯೇ ತೀರ್ಪೊಂದರಲ್ಲಿ ಉಲ್ಲೇಖಿಸಿರುವ ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್, 18 ವರ್ಷಕ್ಕಿಂತ ಕಡಿಮೆ ವಯಸ್ಸಿದ್ದರೂ ಪ್ರೌಢವಸ್ಥೆ ತಲುಪಿದ ಮುಸ್ಲಿಂ ಹೆಣ್ಣು ಮಕ್ಕಳು ತಮ್ಮ ಇಚ್ಛೆಯಂತೆ ಯಾರನ್ನ ಬೇಕಾದರೂ ಮದುವೆಯಾಗಲು ಸ್ವತಂತ್ರರು ಎಂದು ಹೇಳಿದೆ.

ಮುಸ್ಲಿಂ ವೈಯಕ್ತಿಕ ಕಾನೂನು 195ನೇ ಕಲಮಿನ ಅಡಿ ಇರುವ ಅಂಶಗಳ ಆಧಾರದ ಮೇಲೆ ಕೋರ್ಟ್​ ಈ ತೀರ್ಪು ನೀಡಿದ್ದು, ಹೆಣ್ಣುಮಗಳೊಬ್ಬಳ ತಂದೆ ಸಲ್ಲಿಸಿದ್ದ ಅರ್ಜಿಯನ್ನು ವಜಾ ಮಾಡಿದೆ.

17 ವರ್ಷದ ಮುಸ್ಲಿಂ ಬಾಲಕಿಯ ತಂದೆ ಕೋರ್ಟ್​ ಮೊರೆ ಹೋಗಿದ್ದರು. 36 ವರ್ಷದ ತಮ್ಮದೇ ಧರ್ಮದ ವ್ಯಕ್ತಿಯನ್ನು ಮಗಳು ನಿಖಾ ಮಾಡಿಕೊಂಡಿದ್ದಾಳೆ. ಆದರೆ ಆಕೆಗಿನ್ನೂ 18 ತುಂಬಿಲ್ಲದ ಕಾರಣ, ಈ ಮದುವೆಗೆ ಮಾನ್ಯತೆ ಇಲ್ಲ ಎಂದು ಆದೇಶಿಸಬೇಕು. ಮಗಳನ್ನು ಮೋಸದಿಂದ ಮದುವೆ ಮಾಡಿಕೊಳ್ಳಲಾಗಿದೆ ಎಂದು ತಂದೆ ಹೇಳಿದ್ದರು.

ಆದರೆ ಅವರ ಮಗಳು ತಾನು ಸ್ವ ಇಚ್ಛೆಯಿಂದ ನಿಖಾ ಮಾಡಿಕೊಂಡಿರುವುದಾಗಿ ಹೇಳಿದಳು. ಆಕೆ ಪ್ರೌಢಾವಸ್ಥೆಗೆ ಬಂದಿರುವ ಹಿನ್ನೆಲೆಯಲ್ಲಿ ನ್ಯಾಯಮೂರ್ತಿ ಅಲ್ಕಾ ಸರಿನ್ ಅವರು ಮುಸ್ಲಿಂ ವೈಯಕ್ತಿಕ ಕಾನೂನು ಪ್ರಕಾರ ಅವಳ ಮದುವೆಗೆ ಮಾನ್ಯತೆ ಇದೆ. ಹೆಣ್ಣುಮಕ್ಕಳು ಪ್ರೌಢಾವಸ್ಥೆಗೆ ಬಂದು, ಮಾನಸಿಕವಾಗಿ ಸರಿಯಾಗಿದ್ದರೆ ಆಕೆ ಯಾರನ್ನೂ ಬೇಕಾದರೂ ಮದುವೆಯಾಗಬಹುದು ಎಂದಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net