ರೈತ ಮುಖಂಡರಿಂದ ಜೀವಕ್ಕೆ ಅಪಾಯವಿದೆ- ಹಿಂಸಾಚಾರದ ಕುರಿತು ನಟ ದೀಪ್​ ಸಿಧು ಹೇಳಿರುವ ಮಾಹಿತಿ ಇಲ್ಲಿದೆ...

deep sidhu
Published on

ನವದೆಹಲಿ: ಗಣರಾಜ್ಯೋತ್ಸವದ ದಿನ ರೈತರ ಹೆಸರಿನಲ್ಲಿ ಪ್ರತಿಭಟನೆ ನಡೆಸಿ ನಂತರ ಹಿಂಸಾಚಾರ ನಡೆಸಿದ್ದ ಪ್ರಮುಖ ಆರೋಪಿ ನಟ ದೀಪ್​ ಸಿಧು ಈಗ ಪೊಲೀಸರೆದುರು ಕೆಲವೊಂದು ಮಾಹಿತಿಗಳನ್ನು ನೀಡಿದ್ದಾರೆ. ಹಿಂಸಾಚಾರದ ನಂತರ ತಮ್ಮ ಹೆಸರು ಕೇಳಿಬರುತ್ತಿದ್ದಂತೆಯೇ ತಲೆಮರೆಸಿಕೊಂಡು ನಾಪತ್ತೆಯಾಗಿದ್ದ ಈ ನಟ ತಾನು ತಲೆ ಮರೆಸಿಕೊಂಡಿದ್ದು ಏಕೆ ಎನ್ನುವುದಕ್ಕೆ ಕಾರಣ ಹೇಳಿದ್ದಾರೆ.

ಗಣರಾಜ್ಯೋತ್ಸವ ದಿನ ದೆಹಲಿಯಲ್ಲಿ ರೈತರ ಟ್ರ್ಯಾಕ್ಟರ್ ಜಾಥಾ ಸಂದರ್ಭ ಗಲಭೆಗೆ ಪ್ರಚೋದಿಸಿದ ಹಾಗೂ ಕೆಂಪು ಕೋಟೆ ಮೇಲೆ ಧ್ವಜ ಹಾರಿಸಲು ಪ್ರೇರೇಪಣೆ ನೀಡಿದ ಆರೋಪದ ಮೇಲೆ ದೆಹಲಿ ಇವರು ಬಂಧನಕ್ಕೆ ಒಳಗಾಗಿದ್ದಾರೆ.

ತಲೆಮರೆಸಿಕೊಂಡಿದ್ದ ಈ ನಟ ಹೇಳಿದ್ದೇನೆಂದರೆ, ನನ್ನ ಜೀವಕ್ಕೆ ಅಪಾಯವಿತ್ತು. ದೆಹಲಿ ಹಿಂಸಾಚಾರದಲ್ಲಿ ನನ್ನ ಹೆಸರು ಕೇಳಿಬಂದಿತ್ತು. ನನ್ನೊಬ್ಬನಿಂದಲೇ ಈ ಹಿಂಸಾಚಾರ ನಡೆದಿದೆ ಎಂಬ ಆರೋಪಗಳನ್ನು ರೈತ ಮುಖಂಡರು ಮಾಡುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಜೀವಕ್ಕೆ ಅಪಾಯ ಇದ್ದುದರಿಂದ ಅನಿವಾರ್ಯವಾಗಿ ತಪ್ಪಿಸಿಕೊಳ್ಳಬೇಕಾಯಿತೇ ವಿನಾ ಇದರಲ್ಲಿ ನನ್ನ ತಪ್ಪೇನೂ ಇಲ್ಲ ಎಂದಿದ್ದಾರೆ.

ಹಿಂಸಾಚಾರದಲ್ಲಿ ನಾನು ಭಾಗಿಯಾಗಿರುವ ಕಾರಣದಿಂದ ಅಡಗಿ ಕುಳಿತುಕೊಂಡಿರಲಿಲ್ಲ, ಬದಲಾಗಿ ಜೀವಕ್ಕೆ ಹಾನಿಯಾದರೆ ಎನ್ನುವ ಭಯದಿಂದ ಪಲಾಯನ ಮಾಡಿರುವುದಾಗಿ ಪೊಲೀಸರಿಗೆ ಸಿಧು ಹೇಳಿದ್ದಾರೆ. ಯಾವುದೇ ಕೆಟ್ಟ ಉದ್ದೇಶದಿಂದ ಕೆಂಪು ಕೋಟೆಗೆ ನಾನು ಹೋಗಿರಲಿಲ್ಲ. ಎಲ್ಲರೂ ಅಲ್ಲಿಗೆ ಹೋಗುತ್ತಿದ್ದ ಕಾರಣ ನಾನೂ ಹೋಗಿದ್ದೆ ಅಷ್ಟೇ. ಆದರೆ ಟ್ರಾಕ್ಟರ್ ಜಾಥಾದ ಸಮಯದಲ್ಲಿ ಸಂಭವಿಸಿದ ಹಿಂಸಾಚಾರಕ್ಕೆ ಕೃಷಿ ಮುಖಂಡರು ನನ್ನನ್ನು ಮಾತ್ರ ದೂಷಿಸುತ್ತಿದ್ದಾರೆ, ಅವರಿಂದ ನನ್ನ ಜೀವಕ್ಕೆ ಅಪಾಯವಿದೆ ಎಂದಿದ್ದಾರೆ.

ಸದ್ಯ ನಟನನ್ನು ನಿನ್ನೆ ಬುಧವಾರ ಏಳು ದಿನಗಳ ಪೊಲೀಸ್ ಕಸ್ಟಡಿಗೆ ಒಪ್ಪಿಸಲಾಗಿದ್ದು, ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.

ಹಿಂಸಾಚಾರಕ್ಕೆ ಸಂಬಂಧಿಸಿದಂತೆ 12 ಮಂದಿ ಪ್ರಮುಖ ಆರೋಪಿಗಳ ಭಾವಚಿತ್ರ ಬಿಡುಗಡೆಗೊಳಿಸಿ, ನಟ ದೀಪ್ ಸಿಧು ಬಗ್ಗೆ ಮಾಹಿತಿ ನೀಡಿದವರಿಗೆ 1 ಲಕ್ಷ ರೂಪಾಯಿ ಬಹುಮಾನ ನೀಡುವುದಾಗಿ ಘೋಷಿಸಿದ್ದರು. ಆನಂತರ ನವದೆಹಲಿಯಿಂದ 100 ಕಿಲೋ ಮೀಟರ್ ದೂರದಲ್ಲಿರುವ ಹರಿಯಾಣದ ಕರ್ನಲ್ ಬಳಿ ಆರೋಪಿ ದೀಪ್ ಸಿಧುರನ್ನು ದೆಹಲಿ ವಿಶೇಷ ತಂಡದ ಪೊಲೀಸರು ಮಂಗಳವಾರ ಬಂಧಿಸಿದ್ದರು. ಪೊಲೀಸರು ಸಾಕ್ಷ್ಯ ಒದಗಿಸಿದ ನಂತರ ತಾವು ಪ್ರತಿಭಟನೆ ಸ್ಥಳದಲ್ಲಿದ್ದುದಾಗಿ ಒಪ್ಪಿಕೊಂಡಿದ್ದ ಈ ನಟ ಈಗ ಈ ಹೇಳಿಕೆ ನೀಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net