

ನವದೆಹಲಿ: ಏಕಾಂಗಿಯಾಗಿ ಮಕ್ಕಳ ಪೋಷಣೆ ಮಾಡುತ್ತಿರುವ ನೌಕರರಿಗೆ ಮಕ್ಕಳ ರಕ್ಷಣೆ ರಜೆ ನೀಡಲು ಕೇಂದ್ರ ಸರ್ಕಾರ ಮುಂದಾಗಿದೆ. ಅಂದರೆ ಸಿಂಗಲ್ ಪೇರೆಂಟ್ ಆಗಿರುವ ಪುರುಷರಿಗೆ ಈ ಚೈಲ್ಡ್ ಕೇರ್ ಲೀವ್ (ಸಿಸಿಎಲ್) ಸೌಲಭ್ಯ ದೊರಕಲಿದೆ.
ಆದರೆ ಈ ಸೌಲಭ್ಯ ಸಿಗುವುದು ಕೇಂದ್ರ ಸರ್ಕಾರದ ನೌಕರರಿಗೆ ಮಾತ್ರ. ಈ ಕುರಿತು ಕೇಂದ್ರ ಸಚಿವ ಜಿತೇಂದ್ರ ಸಿಂಗ್ ಮಾಹಿತಿ ನೀಡಿದ್ದಾರೆ.
ಕೇಂದ್ರ ಸರ್ಕಾರದ ಕಚೇರಿಗಳಲ್ಲಿ ಕೆಲಸ ಮಾಡುವ ಮಹಿಳೆಯರಿಗೆ ಇದಾಗಲೇ ಈ ಸೌಲಭ್ಯವಿದ್ದು, ಅದನ್ನೀಗ ಒಂಟಿ ಪುರುಷರಿಗೂ ಅನ್ವಯ ಮಾಡಲಾಗುತ್ತಿದೆ ಎಂದು ಸಚಿವರು ಹೇಳಿದ್ದಾರೆ.
ಮಕ್ಕಳ ಪೋಷಣೆ ವಿಚಾರದಲ್ಲಿ ಪತಿಗೂ ಪತ್ನಿಯಷ್ಟೇ ಜವಾಬ್ದಾರಿ ಇದೆ. ಇದೇ ಕಾರಣದಿಂದ ಅವರ ಹೊಣೆಯನ್ನು ಗಮನದಲ್ಲಿರಿಸಿ ಇಂಥದ್ದೊಂದು ಅವಕಾಶ ಕಲ್ಪಿಸಲಾಗಿದೆ. ಅವಿವಾಹಿತರು, ವಿಧುರ ಅಥವಾ ವಿಚ್ಛೇದನ ಪಡೆದವರು ಇದರ ಪ್ರಯೋಜನ ಪಡೆಯಬಹುದಾಗಿದೆ.
ಈ ಸೌಲಭ್ಯ ಪಡೆಯುವ ನೌಕರರು ಕರ್ತವ್ಯ ನಿರ್ವಹಿಸುತ್ತಿರುವ ಸ್ಥಳವನ್ನು ಕೂಡ ತೊರೆಯಬಹುದಾಗಿದೆ. ಅಲ್ಲದೇ ಪ್ರವಾಸ ಭತ್ಯೆ ವಿನಾಯಿತಿಯನ್ನು (ಎಲ್ಟಿಸಿ) ಕೂಡ ಪಡೆಯಲು ಅವಕಾಶ ಕಲ್ಪಿಸಲಾಗಿದೆ.
ಮೊದಲ 365 ದಿನಗಳವರೆಗೆ ಭತ್ಯೆ ಸಂಬಳದ ಶೇ. 100ರಷ್ಟು ಪಡೆಯಲು ಅವಕಾಶವಿದ್ದು, ನಂತರ 365 ದಿನಗಳಿಗೆ ಶೇ. 80ರಷ್ಟು ಭತ್ಯೆ ಸಂಬಳ ನೀಡಬಹುದಾಗಿದೆ ಎಂದು ನಿಯಮದಲ್ಲಿನ ಕೆಲವು ಸಡಿಲಿಕೆಗಳನ್ನು ಸಚಿವ ಸಿಂಗ್ ವಿವರಿಸಿದ್ದಾರೆ.
ವಿಕಲಾಂಗ ಮಕ್ಕಳ ಪೋಷಣೆ ವಿಚಾರದಲ್ಲಿ ಈ ಮುಂಚೆ ಸಿಸಿಎಲ್ ಅಡಿಯಲ್ಲಿ ಇದ್ದಂತಹ 22 ವರ್ಷಗಳ ಮಿತಿಯನ್ನು ಕೂಡ ತೆಗೆದುಹಾಕಲಾಗಿದೆ ಎಂದು ಅವರು ವಿವರಣೆ ನೀಡಿದ್ದಾರೆ.