

ಭೋಪಾಲ್: ಛತ್ತಿಸ್ಗಡ, ಮಧ್ಯ ಪ್ರದೇಶ ಸೇರಿದಂತೆ ಹಲವಾರು ರಾಜ್ಯಗಳಲ್ಲಿ ಬುಡಕಟ್ಟು ಪ್ರದೇಶಗಳ ಹೆಣ್ಣುಮಕ್ಕಳ ಮಾರಾಟದ ಜಾಲ ಅವ್ಯಾಹತವಾಗಿ ನಡೆಯುತ್ತಲೇ ಇದೆ. ಇಂಥ ಪ್ರಕರಣಗಳು ದಿನನಿತ್ಯವೂ ನಡೆಯುತ್ತಿದ್ದರೂ ಅವು ಹೊರಕ್ಕೆ ಬರುವುದೇ ಇಲ್ಲ. ಆದರೆ ಅತ್ಯಂತ ಭಯಾನಕ ಹಾಗೂ ಆಘಾತಕಾರಿ ಎನ್ನುವ ಪ್ರಕರಣವೊಂದರಲ್ಲಿ ಸುಮಾರು 18 ವರ್ಷದ ಯುವತಿಯೊಬ್ಬಳನ್ನು ಕಳೆದ ಏಳು ತಿಂಗಳಲ್ಲಿ ಏಳು ಬಾರಿ ಮಾರಾಟ ಮಾಡಿರುವ ಘಟನೆ ಬೆಳಕಿಗೆ ಬಂದಿದೆ.
ಏಳನೇ ಬಾರಿಗೆ ಮಾರಾಟವಾದ ಮೇಲೆ ಬುದ್ಧಿಮಾಂದ್ಯ ಯುವಕನ ಜತೆ ಆಕೆಯ ವಿವಾಹವಾದ ನಂತರ ಯುವತಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಈ ಘಟನೆಯ ನಂತರ ಈಕೆ ಮಾರಾಟವಾಗಿರುವ ಭಯಾನಕ ಅಂಶ ತಿಳಿದುಬಂದಿದೆ.
ಛತ್ತಿಸಗಢದ ಜಷ್ಟುರ ಜಿಲ್ಲೆಯಿಂದ ಯುವತಿಯನ್ನು ಮೊದಲು ಅಪಹರಿಸಲಾಗಿತ್ತು. ತಂದೆಯ ಜತೆ ಕೃಷಿ ಚಟುವಟಿಕೆಯಲ್ಲಿ ಈಕೆ ತೊಡಗಿಸಿಕೊಂಡಿದ್ದಳು. ಕೆಲಸ ಕೊಡುವ ಆಮಿಷ ಒಡ್ಡಿ ಆಕೆಯನ್ನು ಕರೆದುಕೊಂಡು ಹೋಗಲಾಗಿತ್ತು. ನಂತರ ಬಿಡುಗಡೆ ಮಾಡಲು ಹಣದ ಬೇಡಿಕೆ ಒಡ್ಡಲಾಗಿತ್ತು. ಆದರೆ ಯುವತಿಯ ಮನೆಯವರು ಹಣ ಕೊಡುವಷ್ಟು ಶಕ್ಯರಾಗಿರಲಿಲ್ಲ.
ಹಣ ನೀಡದಿದ್ದಲ್ಲಿ ಮಗಳ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದರಿಂದ ಅವರು ಪೊಲೀಸ್ ಠಾಣೆಯಲ್ಲಿ ದೂರು ದಾಖಲು ಮಾಡಿದ್ದರು. ಯುವತಿಯ ಸಂಬಂಧಿಕರಾದ ಪಂಚಮ್ ಸಿಂಗ್ ರೈ ದಂಪತಿ ಇಂಥದ್ದೊಂದು ಕೃತ್ಯದಲ್ಲಿ ಭಾಗಿಯಾಗಿದ್ದು. ಪೊಲೀಸ್ ತನಿಖೆಯಿಂದ ಬೆಳಕಿಗೆ ಬಂದಿದೆ. 20 ಸಾವಿರ ರೂಪಾಯಿ ಈ ದಂಪತಿ ಯುವತಿಯನ್ನು ಮಾರಾಟ ಮಾಡಿದ್ದರು. ಅಲ್ಲಿಂದ ಯುವತಿಯನ್ನು ಏಳೇ ತಿಂಗಳಿನಲ್ಲಿ ಏಳು ಬಾರಿ ಹೆಚ್ಚು ಹೆಚ್ಚು ಹಣಕ್ಕೆ ಮಾರಾಟ ಮಾಡಲಾಗಿದೆ.
ನಂತರ ಕೊನೆಯದಾಗಿ ಬುದ್ಧಿಮಾಂದ್ಯ ವ್ಯಕ್ತಿ ಬಬ್ಲು ಎಂಬಾತನ ಜತೆ ಈಕೆಯ ವಿವಾಹ ಮಾಡಲಾಗಿತ್ತು. ತನಗಾಗಿರುವ ಅನ್ಯಾಯದಿಂದ ಬೇಸತ್ತು ಹೋಗಿರುವ ಯುವತಿ, ಆತ್ಮಹತ್ಯೆಗೆ ಶರಣಾಗಿದ್ದಾಳೆ. ಪಾಲಕರು ನೀಡಿದ್ದ ದೂರಿನ ಮೇಲೆ ತನಿಖೆ ಕೈಗೊಂಡಿರುವ ಪೊಲೀಸರಿಗೆ ಯುವತಿ ಮೃತಪಟ್ಟಿರುವುದು ತಿಳಿದಿದೆ.
ಈಕೆಯನ್ನು ಮಾರಾಟ ಮಾಡಿದ ದಂಪತಿ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾರೆ. ಅವರು ತಪ್ಪು ಒಪ್ಪಿಕೊಂಡಿದ್ದಾರೆ.
ಸಂಬಂಧಿಸಿದಂತೆ ಎಂಟು ಆರೋಪಿಗಳನ್ನು ಬಂಧಿಸಲಾಗಿದೆ. ಛತ್ತಿಸ್ಗಡ, ಮಧ್ಯಪ್ರದೇಶ ಹಾಗೂ ಉತ್ತರ ಪ್ರದೇಶ ಮೂರು ರಾಜ್ಯಗಳಲ್ಲಿ ಯುವತಿಯ ಮಾರಾಟ ಮಾಡಲಾಗಿದೆ. ಈ ಬಗ್ಗೆ ಹೆಚ್ಚಿನ ತನಿಖೆ ಕೈಗೊಂಡಿದ್ದೇವೆ ಎಂದು ಪೊಲೀಸರು ಹೇಳಿದ್ದಾರೆ.