

ನವದೆಹಲಿ: ಮಹಾರಾಷ್ಟ್ರದ ಪುಣೆಯಿಂದ ಸುಮಾರು 80 ಕಿಮೀ ದೂರದಲ್ಲಿರುವ ಸತಾರಾ ಜಿಲ್ಲೆಯ ಖಂಬಟ್ಕಿ ಘಾಟ್ ನಡುವಿನ ಅಂತರ ತಗ್ಗಿಸಲು, ಸಂಚಾರ ದಟ್ಟಣೆ ಕಡಿಮೆ ಮಾಡಲು ಹಾಗೂ ವಾಯು ಮಾಲಿನ್ಯವನ್ನು ಕಡಿಮೆ ಮಾಡುವ ಸಲುವಾಗಿ ಆರು ಸುರಂಗ ಮಾರ್ಗಗಳು ನಿರ್ಮಾಣಗೊಳ್ಳಲಿವೆ. ಇವುಗಳಿಗೆ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಚಾಲನೆ ನೀಡಿದ್ದಾರೆ.
ತಲಾ ಮೂರು ಲೇನ್ಗಳ ಅವಳಿ ಸುರಂಗಗಳು ಇದಾಗಿದ್ದು, ವಿಡಿಯೋ ಕಾನ್ಫರೆನ್ಸ್ ಮೂಲಕ ಸಚಿವರು ಚಾಲನೆ ನೀಡಿದರು. ಚಾಲನೆ ನೀಡಿದ ಬಳಿಕ ಈ ಕುರಿತು ಗಡ್ಕರಿ ಟ್ವೀಟ್ ಮಾಡಿದ್ದಾರೆ, ಸತಾರಾ - ಪುಣೆ ಭಾಗದಲ್ಲಿರುವ ಖಂಬಟ್ಕಿ ಘಾಟ್ನಲ್ಲಿ ನಡೆಯುತ್ತಿರುವ ಈ ಯೋಜನೆಯಿಂದ ಬೆಂಗಳೂರು- ಮುಂಬೈ ಹೆದ್ದಾರಿ ಯೋಜನೆಗಳು ಕೂಡ ವೇಗ ಪಡೆದುಕೊಳ್ಳಲಿವೆ ಎಂದಿದ್ದಾರೆ.
ಈ ಆರು ಸುರಂಗಗಳ ಉದ್ದೇಶ ವಿಶಾಲವಾಗಿದೆ. ಈ ಯೋಜನೆಯಿಂದ ಸಮಯ ಮತ್ತು ಹಣ ಉಳಿತಾಯವಾಗಲಿದೆ ಎಂದಿದ್ದಾರೆ ಸಚಿವರು.