ಮಗನಿಗೆ ₹100 ಕೊಟ್ಟು ಕಳುಹಿಸಿದ ಅಮ್ಮ: 4 ಕೋಳಿಮರಿ ಜತೆ ₹150 ತಂದ ಪುಟಾಣಿ!

chicken
Published on

ನವದೆಹಲಿ: ಮಕ್ಕಳು ಏನು ಮಾಡಿದರೂ ಚೆಂದ ಎನ್ನುತ್ತಾರೆ. ಆದರೆ ಇಲ್ಲೊಬ್ಬ ಪುಟಾಣಿ ಮಾತ್ರ ಎಲ್ಲರೂ ಭೇಷ್​ ಭೇಷ್​ ಎನ್ನುವ ಕಾರ್ಯ ಮಾಡಿದ್ದಾನೆ. ಈತನ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ಸಕರ್​ ವೈರಲ್​ ಆಗುತ್ತಿದೆ.

ಈ ಬಾಲಕನ ಚಿಕ್ಕಮ್ಮ ಮಲಾನಾ ಎಂಬುವವರು ಟ್ವೀಟ್​ ಮೂಲಕ ತನ್ನ ಅಕ್ಕನ ಮಗನ ಸಾಹಸ ಕಾರ್ಯದ ಬಗ್ಗೆ ಬರೆದುಕೊಂಡಿದ್ದು, ಇದೀಗ ಭಾರಿ ಮೆಚ್ಚುಗೆ ಗಳಿಸುತ್ತಿದೆ.

ಶಾಲೆಗಳನ್ನು ತೆರೆಯಬಾರದು ಎಂಬ ನಿಯಮವಿದ್ದರೂ ಕೆಲವು ಖಾಸಗಿ ಶಾಲೆಗಳು ಈಗಾಗಲೇ ಕಾರ್ಯ ಆರಂಭಿಸಿಬಿಟ್ಟಿವೆ. ಒಂದನೇ ಕ್ಲಾಸ್​ ಬಾಲಕ ಮೊದಲ ದಿನ ಶಾಲೆಗೆ ಹೋಗುವಾಗ ತಾಯಿ ನೂರು ರೂಪಾಯಿ ಕೊಟ್ಟು ಕಳುಹಿಸಿದ್ದಾಳೆ. ಆದರೆ ಈ ಬಾಲಕ ವಾಪಸ್ ಬರುವಾಗ 150 ರೂಪಾಯಿ ತಂದಿದ್ದಾನೆ, ಮಾತ್ರವಲ್ಲದೇ ನಾಲ್ಕು ಕೋಳಿಮರಿಗಳನ್ನೂ ತಂದಿದ್ದಾನಂತೆ.

ಮಲಾನಾ ಟ್ವೀಟರ್​ನಲ್ಲಿ ಹೇಳಿರುವ ಪ್ರಕಾರ, ಬಾಲಕ 100 ರೂಪಾಯಿ ತೆಗೆದುಕೊಂಡು ಶಾಲೆಗೆ ಹೋಗಿದ್ದ. ಶಾಲೆಯ ಎದುರಿಗೇ ವ್ಯಕ್ತಿಯೊಬ್ಬ ಸೈಕಲ್​ನಲ್ಲಿ ಕೋಳಿ ಮರಿಗಳನ್ನು ಮಾರುತ್ತಿದ್ದ. ಅನೇಕ ಮಂದಿ ಸುತ್ತುಗಟ್ಟಿ ಅದನ್ನು ಕೊಳ್ಳುತ್ತಿದ್ದರು.

ಆ ಸಂದರ್ಭದಲ್ಲಿ ಕೆಲವು ಮರಿಗಳು ಮಾರಾಟಗಾರನ ಕೈ ತಪ್ಪಿಸಿಕೊಂಡು ಓಡಿ ಹೋದವು. ಆದರೆ ಯಾರೂ ಅದನ್ನು ಹಿಡಿದುಕೊಳ್ಳಲು ಹೋಗಲಿಲ್ಲ. ಕೆಲವರು ಅದರ ಹಿಂದೆ ಓಡಲು ಹೆದರಿದರು. ಆದರೆ ಈ ಬಾಲಕ ಮಾತ್ರ ಕೋಳಿ ಮರಿಗಳ ಹಿಂದೆಯೇ ಓಡೋಡಿ ಹೋಗಿ, ಒಂದೂ ಮರಿ ಕೂಡ ತಪ್ಪಿಸಿಕೊಳ್ಳದಂತೆ ನೋಡಿಕೊಂಡು ಎಲ್ಲವನ್ನೂ ಹಿಡಿದು ಬ್ಯಾಗ್​ನಲ್ಲಿ ತುಂಬಿ ಮಾರಾಟಗಾರನಿಗೆ ಕೊಟ್ಟಿದ್ದಾನೆ, ಆ ಸಂದರ್ಭದಲ್ಲಿ ಬಾಲಕನ ಹೋಂ ವರ್ಕ್ ಬುಕ್ ಕೂಡ ಹಾಳಾಯಿತು ಎಂದು ಅವರು ಬರೆದಿದ್ದಾರೆ.

ಎಷ್ಟೊಂದು ಮರಿಗಳನ್ನು ಹಿಡಿದುಕೊಟ್ಟಿರುವುದನ್ನು ನೋಡಿದ ಮಾರಾಟಗಾರನಿಗೆ ಅದೆಷ್ಟು ಖುಷಿಯಾಯಿತು ಎಂದರೆ ನಾಲ್ಕು ಮರಿಗಳನ್ನು ಬಾಲಕನಿಗೆ ಕೊಟ್ಟಿದ್ದೂ ಅಲ್ಲದೇ, ತನ್ನ ಅಪಾರ ಹಣವನ್ನು ಉಳಿಸಿದ್ದಕ್ಕಾಗಿ 50 ರೂಪಾಯಿಗಳನ್ನೂ ಕೊಟ್ಟು ಕಳುಹಿಸಿದ್ದಾನೆ. ಬಾಲಕ ಅಮ್ಮ ಕೊಟ್ಟ 100 ರೂಪಾಯಿ ಖರ್ಚು ಮಾಡಿರಲಿಲ್ಲ.

ಈ ಕಾರಣದಿಂದ 150 ರೂಪಾಯಿ ಹಾಗೂ ನಾಲ್ಕು ಕೋಳಿಮರಿಗಳನ್ನು ಅಮ್ಮನಿಗೆ ನೀಡಿದ್ದಾನೆ ಎಂದು ಮಲಾನಾ ಬರೆದುಕೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net