

ಕೋಲ್ಕತಾ: ಕಳೆದ ವಾರವಷ್ಟೇ ಪಶ್ಚಿಮ ಬಂಗಾಳದ ಉತ್ತರ 24 ಪರಗಣ ಜಿಲ್ಲೆಯ ಬಿಜೆಪಿ ಸಂಸದ ಅರ್ಜುನ್ ಸಿಂಗ್ ಅವರ ಮನೆಯ ಮುಂದೆ ಮೂರು ಕಚ್ಚಾ ಬಾಂಬ್ ದಾಳಿ ನಡೆದಿತ್ತು. ಬೈಕ್‌ನಲ್ಲಿ ಬಂದ ಮೂವರು ವ್ಯಕ್ತಿಗಳು ಕೋಲ್ಕತ್ತಾದಿಂದ 100 ಕಿಮೀ ದೂರದಲ್ಲಿರುವ ಜಗತ್ತಾಲ್‌ನಲ್ಲಿರುವ ಸಂಸದರ ಮನೆಯ ಮೇಲೆ ಬಾಂಬ್ ಎಸೆದಿದ್ದರು. ಆ ಸಮಯದಲ್ಲಿ ಸಿಂಗ್ ಅವರು ದೆಹಲಿಯಲ್ಲಿದ್ದರು, ಅವರ ಕುಟುಂಬ ಸದಸ್ಯರು ಮನೆಯೊಳಗೆ ಇದ್ದರೂ ಅದೃಷ್ಟವಶಾತ್ ಯಾವುದೇ ಅನಾಹುತ ಸಂಭವಿಸಿರಲಿಲ್ಲ.
ಇದರ ತನಿಖೆ ನಡೆಯುತ್ತಿರುವ ಬೆನ್ನಲ್ಲೇ ಇಂದು ಪುನಃ ಅವರ ಮನೆಯ ಎದುರಿಗೆ ಬಾಂಬ್ ಬ್ಲಾಸ್ಟ್ ಮಾಡಲಾಗಿದೆ. ಕಳೆದ ಬಾರಿ ನಡೆದ ಬ್ಲಾಸ್ಟ್‌ನ ತನಿಖೆಯನ್ನು ರಾಷ್ಟ್ರೀಯ ತನಿಖಾ ಸಂಸ್ಥೆ ಪೂರ್ಣಗೊಳಿಸುವ ಮುನ್ನವೇ ಈಗ ಪುನಃ ಮೂರು ಕಚ್ಚಾ ಬಾಂಬ್‌ಗಳನ್ನು ಎಸೆಯಲಾಗಿದೆ.
ರಾಜ್ಯ ಪೊಲೀಸರು ಬಾಂಬ್ ತಂಡಕ್ಕೆ ಕರೆ ನೀಡಿದ್ದು, ಬಾಂಬ್ ಸ್ಫೋಟದ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸುತ್ತಿದ್ದಾರೆ. ಈಗ ಇದು ರಾಜಕೀಯ ತಿರುವು ಪಡೆದುಕೊಂಡಿದ್ದು, ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಗುರಿಯಾಗಿಸಿಕೊಂಡು ಆಡತಾರೂಢ ತೃಣಮೂಲ ಕಾಂಗ್ರೆಸ್ಸೇ ಇಂಥ ಗೂಂಡಾಗಳಿಗೆ ಆಶ್ರಯ ನೀಡಿದೆ ಎಂಬ ಆರೋಪ ಕೇಳಿಬಂದಿದೆ.
ಅರ್ಜುನ್ ಸಿಂಗ್ ಅವರು ಬಿಜೆಪಿಗೆ ಸೇರುವ ಮುನ್ನ ತೃಣಮೂಲ ಕಾಂಗ್ರೆಸ್ ಜತೆಗಿದ್ದರು. ಈಗ ಅದೇ ಪಕ್ಷದ ಯಾರೋ ತಮ್ಮನ್ನು ಕೊಲೆ ಮಾಡಲು ಸಂಚುರೂಪಿಸುತ್ತಿರುವುದಾಗಿ ಸಿಂಗ್ ಆರೋಪಿಸಿದ್ದಾರೆ. ತಮ್ಮ ಪಕ್ಷದಲ್ಲಿ ಅಂಥವರು ಯಾರೂ ಇಲ್ಲ ಎಂದು ತೃಣಮೂಲ ಕಾಂಗ್ರೆಸ್ ಹೇಳಿದೆ.